Thursday, September 28, 2023
spot_img
- Advertisement -spot_img

ಸನಾತನ ವಿವಾದ: ಜಾತಿ ಆಧಾರದ ಮೇಲೆ ನಮ್ಮನ್ನು ವಿಭಜಿಸಿದವರು ಯಾರು ಎಂದ ಪ್ರಿಯಾಂಕ್

ಬೆಂಗಳೂರು: ತಮಿಳುನಾಡು ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಕುರಿತು ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದ್ದು, ರಾಜ್ಯದಲ್ಲೂ ವಾದ-ವಿವಾದ ನಡೆಯುತ್ತಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಸಂಚಾಲಕ ಬಿ.ಎಲ್ ಸಂತೋಷ್ ಅವರ ಮುಂದೆ ಸಚಿವ ಪ್ರಿಯಾಂಕ್ ಖರ್ಗೆ ಹಲವು ಪ್ರಶ್ನೆಗಳನ್ನು ಇಟ್ಟಿದ್ದಾರೆ.

‘ಸಮಾನತೆಯನ್ನು ಉತ್ತೇಜಿಸದ ಅಥವಾ ಮಾನವನ ಘನತೆಯನ್ನು ಖಚಿತಪಡಿಸಿಕೊಳ್ಳದ ಯಾವುದೇ ಧರ್ಮ ನನ್ನ ಪ್ರಕಾರ ಧರ್ಮವಲ್ಲ. ನಿಮ್ಮನ್ನು ಮನುಷ್ಯರಂತೆ ನಡೆಸಿಕೊಳ್ಳದ ಯಾವುದೇ ಧರ್ಮವು ರೋಗವಿದ್ದಂತೆ’ ಎಂದು ಪ್ರಿಯಾಂಕ್ ಹೇಳಿದ್ದರು. ‘ಹಾಗಾದರೆ, ಯಾರಿಗಾದರೂ ಹೊಟ್ಟೆಯಲ್ಲಿ ಸೋಂಕು ಇದ್ದರೆ, ನೀವು ತಲೆಯನ್ನೇ ಕತ್ತರಿಸುತ್ತೀರಿ’ ಎಂದು ಟ್ವೀಟ್ ಮೂಲಕ ಪ್ರಿಯಾಂಕ್ ಅವರನ್ನು ಬಿ.ಎಲ್ ಸಂತೋಷ್ (BL Santhosh) ಪ್ರಶ್ನಿಸಿದ್ದರು.

ಇದನ್ನೂ ಓದಿ; ‘ಉದಯನಿಧಿ ತಲೆ ಕಡಿದ್ರೆ ₹10 ಕೋಟಿ, ಇಲ್ಲದಿದ್ರೆ ನಾನೇ ಕಡೀತೀನಿ’

ಇದಕ್ಕೆ ಸಮಜಾಯಿಷಿ ನೀಡಿರುವ ಪ್ರಿಯಾಂಕ್ (Priyank kharge) , ‘ಚಿಕಿತ್ಸೆ ಅಗತ್ಯವಿರುವ ಸೋಂಕು ಇದೆ ಎಂದು ಒಪ್ಪಿಕೊಂಡಿದ್ದಕ್ಕೆ ತುಂಬಾ ಖುಷಿಯಾಯಿತು. ಸಾವಿರಾರು ವರ್ಷಗಳಿಂದ ಅನೇಕ ಸೋಂಕುಗಳು ಇವೆ ಮತ್ತು ಇಂದಿಗೂ ಪ್ರಚಲಿತದಲ್ಲಿವೆ. ಅದು ಮನುಷ್ಯರ ನಡುವೆ ತಾರತಮ್ಯವನ್ನುಂಟುಮಾಡಿ, ಮಾನವನ ಘನತೆಯನ್ನು ನಿರಾಕರಿಸುತ್ತದೆ. ನಾನು ನಿಮ್ಮಷ್ಟು ಬುದ್ಧಿವಂತನಲ್ಲ. ಆದರೆ, ದಯವಿಟ್ಟು ನನಗೆ ಜ್ಞಾನೋದಯ ಮಾಡಿ’ ಎಂದು ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಸಮಾಜದಲ್ಲಿ ಈ ನಿಯಮಗಳನ್ನು ಯಾರು ಹಾಕಿದರು ಎಂದು ಪ್ರಶ್ನಿಸಿದರುವ ಅವರು, ‘ಯಾರನ್ನಾದರೂ ಇನ್ನೊಬ್ಬರಿಗಿಂತ ಹೆಚ್ಚು ನೀತಿವಂತರನ್ನಾಗಿ ಮಾಡುವುದು ಯಾವುದು?, ಜಾತಿಯ ಆಧಾರದ ಮೇಲೆ ನಮ್ಮನ್ನು ವಿಭಜಿಸಿದವರು ಯಾರು?, ಕೆಲವು ಜನರು ಮಾತ್ರ ಯಾಕೆ ಅಸ್ಪೃಶ್ಯರಾಗಿದ್ದಾರೆ, ಅವರು ಈಗಲೂ ದೇವಸ್ಥಾನಗಳನ್ನು ಏಕೆ ಪ್ರವೇಶಿಸಬಾರದು? ಅಸಮಾನ ಮತ್ತು ದಮನಕಾರಿ ಜಾತಿ ಆಧಾರಿತ ಸಾಮಾಜಿಕ ರಚನೆ ಮಾಡಿದ್ದು ಯಾರು’ ಎಂದು ಕೇಳಿದ್ದಾರೆ.

ಇದನ್ನೂ ಓದಿ; ಸನಾತನ ಧರ್ಮದ ಅವಹೇಳನ : ಉದಯನಿಧಿ ವಿರುದ್ಧ ಸುಪ್ರೀಂ ವಕೀಲರಿಂದ ದೂರು

‘ಯಾರೂ ತಲೆ ಕಡಿಯುವ ಉದ್ದೇಶ ಹೊಂದಿಲ್ಲ. ಆದರೆ, ಎಲ್ಲರಿಗೂ ಸಮಾನ ಹಕ್ಕು ಮತ್ತು ಘನತೆಯೊಂದಿಗೆ ಸೋಂಕನ್ನು ಗುಣಪಡಿಸುವ ಅಗತ್ಯವಿದೆ. ಈ ಎಲ್ಲ ಸೋಂಕುಗಳಿಗೆ ಒಂದೇ ಪರಿಹಾರವೆಂದರೆ ನಿಮ್ಮ ಸಂಸ್ಥೆ ಮತ್ತು ನೀವು ವಿರುದ್ಧವಾಗಿರುವ ಸಂವಿಧಾನ. ನೀವು ಕರ್ನಾಟಕದವರು, ದಯವಿಟ್ಟು ಗುರು ಬಸವಣ್ಣನವರ ಉಪದೇಶಗಳನ್ನು ಹರಡಿ, ಇದು ನಮಗೆ ಹೆಚ್ಚು ಸಮಾನ ಸಮಾಜವನ್ನು ನಿರ್ಮಿಸಲು ಸಹಾಯ ಮಾಡುತ್ತದೆ’ ಎಂದು ಸಲಹೆ ನೀಡಿರುವ ಅವರು, ಬಸವಣ್ಣನವರ ಪ್ರಸಿದ್ದ ವಚನದ ‘ಇವನಾರವ, ಇವನಾರವ, ಇವನಾರವ ನೆಂದೆನಿಸದಿರಯ್ಯಾ, ಇವ ನಮ್ಮವ, ಇವ ನಮ್ಮವ, ಇವ ನಮ್ಮವ ನೆಂದೆನಿಸಯ್ಯ, ಕೂಡಲ ಸಂಗಮದೇವ ನಿಮ್ಮ ಮಹಾ ಮನೆಯ ಮಗನೆಂದೆನಿಸಯ್ಯ’ ಸಾಲುಗಳನ್ನು ಬರೆದುಕೊಂಡಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles