ಮೈಸೂರು: ವಿಧಾನಸಭಾ ಎಲೆಕ್ಷನ್ ಸಮೀಪಿಸುತ್ತಿದ್ದಂತೆ ಮಾಜಿ ಎಂಎಲ್ಸಿ ಸಂದೇಶ್ ನಾಗರಾಜ್ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.
ಕಳೆದ ಬಾರಿ ಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸಂದೇಶ್ ನಾಗರಾಜ್ ಪ್ರಸ್ತುತ ಬಿಜೆಪಿಯ ಸ್ಥಳೀಯ ಬೆಳವಣಿಗೆಯಿಂದ ಬೇಸರಗೊಂಡಿದ್ದಾರೆ. ಈ ಹಿನ್ನೆಲೆ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆಯನ್ನು ನೀಡಿದ್ದು, ಸಂದೇಶ್ ನಾಗರಾಜ್ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಜೆಡಿಎಸ್ ಮೂಲಕ ವಿಧಾನ ಪರಿಷತ್ ಸದಸ್ಯರಾಗಿ ಚುನಾಯಿತರಾಗಿದ್ದ ಸಂದೇಶ್ ನಾಗರಾಜ್, ಕಾಂಗ್ರೆಸ್ ಸೇರ್ಪಡೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಬಹಳ ಉತ್ಸಾಹದಿಂದಲೇ ಬಿಜೆಪಿ ಸೇರಿದ ಸಂದೇಶ್ ನಾಗರಾಜ್, ಸ್ವಲ್ಪ ದಿನಗಳ ನಂತರ ಪಕ್ಷದ ಚಟುವಟಿಗೆಗಳಿಂದ ದೂರ ಉಳಿದ್ರು. ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಒಂದು ಸುತ್ತಿನ ಮಾತುಕತೆ ಕೂಡ ನಡೆಸಲಾಗಿದ್ದು, ಕಾಂಗ್ರೆಸ್ ಸೇರ್ಪಡೆ ಖಚಿತ ಅಂತ ಆಪ್ತ ಮೂಲಗಳು ತಿಳಿಸಿದೆ.
ಕಳೆದ 40 ವರ್ಷಗಳಿಂದ ವಿವಿಧ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ನಿರ್ಮಾಪಕ ಸಂದೇಶ್ ನಾಗರಾಜ್, ಎಸ್ ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ 2003 ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. 2022 ರಲ್ಲಿ ಬಿಜೆಪಿಯಿಂದ ಟಿಕೆಟ್ ನೀಡಲಿಲ್ಲ. ಇದರಿಂದ ಬಿಜೆಪಿ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.