ಜೈಪುರ: ಆರ್ ಎಸ್ ಎಸ್ ಸಂಘ ಬಲಪಂಥೀಯ, ಎಡಪಂಥೀಯ ಸಿದ್ಧಾಂತಕ್ಕೆ ಅಂಟಿಕೊಂಡಿಲ್ಲ. ಅದು ರಾಷ್ಟ್ರೀಯವಾದವನ್ನು ಮಾತ್ರ ಬೆಂಬಲಿಸುತ್ತದೆ” ಎಂದು ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ಭಾರತದಲ್ಲಿ ವಾಸಿಸುವ ಎಲ್ಲರೂ ಹಿಂದೂಗಳು. ನಮ್ಮ ಪೂರ್ವಜರು ಹಿಂದೂಗಳಾಗಿದ್ದರು. ನಮ್ಮ ಆರಾಧನೆ, ಆಚರಣೆ ವಿಧಾನದಿಂದಾಗಿ ನಾವು ಬದಲಾಗಿದ್ದೇವೆ. ವಿಭಿನ್ನ ಪದ್ಧತಿಗಳಿಂದಾಗಿ ನಾವು ಬೇರೆ ಬೇರೆ ರೀತಿಯಾಗಿ ಗುರುತಿಸಿಕೊಂಡಿದ್ದೇವೆ. ನಮ್ಮೆಲ್ಲರಲ್ಲಿ ಒಂದೇ ಡಿಎನ್ಎ ಇದೆ” ಎಂದರು.
ಜನರು ತಮ್ಮ ಧರ್ಮಾಚರಣೆಗಳನ್ನು ಉಳಿಸಿಕೊಂಡು ದೇಶದ ಒಕ್ಕೂಟ ವ್ಯವಸ್ಥೆಯಡಿ ಕೆಲಸ ಮಾಡಬಹುದು. ಸಂಘದ ಸಿದ್ಧಾಂತಗಳು ಕಷ್ಟಕರವಾಗಿಲ್ಲ. ಮನಸ್ಸು, ಹೃದಯವನ್ನು ವಿಶಾಲವನ್ನಾಗಿ ಬೆಳೆಸುವುದೇ ಸಂಘದ ಕೆಲಸ. ಜೀವನ ಅಂದರೇನು? ಗುರಿ, ಧ್ಯೇಯೋದ್ದೇಶಗಳ ಬಗ್ಗೆ ಸಂಘ ಅರಿವು ಮೂಡಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಸಂವಿಧಾನ ಒಳ್ಳೆಯದೇ, ಪಾಲನೆ ಸರಿ ಇರಲಿ: “ದೇಶದ ಸಂವಿಧಾನ ಉತ್ತಮವಾಗಿದ್ದು, ಅದನ್ನು ನಡೆಸಿ, ಪಾಲಿಸಬೇಕಾದವರು ಕೆಟ್ಟವರಾಗಿದ್ದರೆ ಸಂವಿಧಾನವೂ ಏನೂ ಮಾಡಲು ಸಾಧ್ಯವಿಲ್ಲ. ನಮ್ಮ ಮುಂದಿನ ಪೀಳಿಗೆಯು ಸಾಮಾಜಿಕ ಕಳಂಕದಿಂದ ನರಳಬಾರದು ಎಂದರೆ ಅದನ್ನು ನಾವು ಕಾಪಾಡಬೇಕು. ಸಂಘಕ್ಕೆ ಸೇರಿದ ಸ್ವಯಂಸೇವಕರು ದೇಶಕ್ಕಾಗಿ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ ಎಂದರು.