ಲೂಧೀಯಾನಾ : ಜಲಂಧರ್‌ನ ಕಾಂಗ್ರೆಸ್ ಸಂಸದ ಸಂತೋಖ್ ಸಿಂಗ್ ಚೌಧರಿಗೆ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ.
ರಾಹುಲ್ ಗಾಂಧಿ ಸುದ್ದಿ ತಿಳಿದಂತೆ ಆಸ್ಪತ್ರೆಗೆ ಧಾವಿಸಿದ್ದು, ಯಾತ್ರೆಯನ್ನು ಸ್ಥಗಿತಗೊಳಿಸಿದ್ದಾರೆ. ಸಂತೋಖ್ ಸಿಂಗ್ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರೊಂದಿಗೆ ಯಾತ್ರೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದರು. ಸಂತೋಖ್ ಸಿಂಗ್ ಅವರನ್ನು ಕೂಡಲೇ ಫಗ್ವಾರಾದ ವಿರ್ಕ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಆಸ್ಪತ್ರೆಯ ಅಧಿಕಾರಿಗಳು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.
ಸಂತೊಕ್ ಸಿಂಗ್ ನಿಧನಕ್ಕೆ “ನಮ್ಮ ಸಂಸದ, ಶ್ರೀ ಸಂತೋಖ್ ಸಿಂಗ್ ಚೌಧರಿ ಅವರ ಹಠಾತ್ ನಿಧನದ ಸುದ್ದಿ ಕೇಳಿ ತೀವ್ರ ಆಘಾತ ಹಾಗೂ ದುಃಖವಾಗಿದೆ. ಅವರ ಅಗಲುವಿಕೆ ಪಕ್ಷಕ್ಕೆ ಮತ್ತು ಸಂಘಟನೆಗೆ ಭಾರಿ ಹೊಡೆತ ನೀಡಿದೆ. ಈ ನೋವಿನ ಸಮಯದಲ್ಲಿ, ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪ ಸೂಚಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ. ಸಂತೋಖ್ ಸಿಂಗ್ ನಿಧನಕ್ಕೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ದುಃಖ ವ್ಯಕ್ತಪಡಿಸಿದ್ದು, ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
“ಜಲಂಧರ್‌ನ ಕಾಂಗ್ರೆಸ್ ಸಂಸದ ಸಂತೋಖ್ ಸಿಂಗ್ ಚೌಧರಿ ಅವರ ಅಕಾಲಿಕ ಮರಣದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ” ಎಂದು ಬರೆದಿದ್ದಾರೆ. ಚೌಧರಿ ಅವರ ನಿಧನಕ್ಕೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಕಾಂಗ್ರೆಸ್ ನಾಯಕ ಜೈರಾಂ ರಮೇಶ್, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕ್ಯಾ. ಅಮರಿಂದರ್ ಸಿಂಗ್, ನಟ ಕಮಲ ಹಾಸನ್, ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಸೇರಿದಂತೆ ಅನೇಕ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.