ಬೆಂಗಳೂರು: ಸ್ಯಾಂಟ್ರೋ ರವಿಯ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತ್ನಿಯ ವಿರುದ್ಧ ಸುಳ್ಳು ಪ್ರಕರಣ, ಮಾನಸಿಕ ಹಾಗೂ ದೈಹಿಕ ಕಿರುಕುಳ ಪ್ರಕರಣದಲ್ಲಿ ಬಂಧಿತನಾಗಿರುವ ಸ್ಯಾಂಟ್ರೋ ರವಿ ಸದ್ಯ ಸಿಐಡಿ ವಶದಲ್ಲಿದ್ದಾರೆ.
ಜನವರಿ 30ಕ್ಕೆ ಕಸ್ಟಡಿ ಅವಧಿ ಅಂತ್ಯವಾಗಲಿದೆ. ಮಧುಮೇಹದಿಂದ ಬಳಲುತ್ತಿರುವ ಆರೋಪಿಯ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದಿತ್ತು. ತಕ್ಷಣ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಅತ್ಯಾಚಾರ, ವೇಶ್ಯಾವಾಟಿಕೆ, ವಂಚನೆ, ಜಾತಿ ನಿಂದನೆ, ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿ ಮಂಜುನಾಥ್ ಕೆ.ಎಸ್.ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧದ ದೂರುಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಸಿಐಡಿ ಪೊಲೀಸರಿಗೆ ನಿರ್ದೇಶನ ನೀಡಿದೆ.
ಮಧುಮೇಹ ಖಾಯಿಲೆಯಿಂದ ಬಳಲುತ್ತಿದ್ದ ಸ್ಯಾಂಟ್ರೋ ರವಿಯನ್ನು ಸಿಐಡಿ ಪೊಲೀಸರು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಶುಗರ್ 400 ಕ್ಕೂ ಅಧಿಕವಾಗಿತ್ತು. ಅಧಿಕಾರಿಗಳಿಗೆ ನಿಯಮಿತ ಮಾತ್ರೆಗಳಿಗಿಂತ ಹೆಚ್ಚಿನ ಮಾತ್ರೆಗಳನ್ನು ಸೇವಿಸಿದ ಅನುಮಾನ ಬಂದಿದೆ. ಸದ್ಯಕ್ಕೆ ವೈದ್ಯರ ಬಳಿ ಅಧಿಕಾರಿಗಳು ಮಾಹಿತಿ ತಿಳಿದುಕೊಳ್ಳುತ್ತಿದ್ದಾರೆ.