ರಾಯಚೂರು: ಟಾಪ್ ಲೀಡರ್‌ಗಳಿಗೆ ಟಾರ್ಗೆಟ್ ಮಾಡುವುದು ರಾಜಕೀಯದಲ್ಲಿ ಸ್ವಾಭಾವಿಕ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಒಂದು ಪಕ್ಷದವರು ಇನ್ನೊಂದು ಪಕ್ಷದವರನ್ನು ಟಾರ್ಗೆಟ್ ಮಾಡುತ್ತಾರೆ. ನಾವು ಬಿಜೆಪಿಯವರಿಗೆ ಟಾರ್ಗೆಟ್ ಮಾಡುತ್ತಿರುತ್ತೇವೆ, ಅವರು ನಮಗೆ ಮಾಡಿದ್ದಾರೆ ಎಂದು ಹೇಳಿದರು. ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳು ಬಹಳ ಇದ್ದಾರೆ. ಭಿನ್ನಮತ ಆಗದ ಹಾಗೆ ಜಿಲ್ಲಾವಾರು ಸಭೆ ಮಾಡುತ್ತೇವೆ. ಈ ತಿಂಗಳು ಅರ್ಧದಷ್ಟು ಟಿಕೆಟ್ ಘೋಷಣೆ ಮಾಡಲೇಬೇಕಿದೆ ಎಂದರು.
ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿ, ಅಭ್ಯರ್ಥಿಗಳ ಮೊದಲ ಪಟ್ಟಿ ಫೆಬ್ರವರಿ ಕೊನೆಯ ವಾರ ಅಥವಾ ಮಾರ್ಚ್ ಮೊದಲ ವಾರದಲ್ಲಿ ಹೈಕಮಾಂಡ್ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದರು.
ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗಲೇ ಹಿಂದೂಗಳಿಗೆ ಹೆಚ್ಚು ರಕ್ಷಣೆ ಸಿಕ್ಕಿದೆ. ಮಂಗಳೂರು, ಉಡುಪಿ, ಕಾರವಾರದಲ್ಲಿ ನಮ್ಮ ಅವಧಿಯಲ್ಲೇ ಹೆಚ್ಚು ರಕ್ಷಣೆ ಸಿಕ್ಕಿದೆ ಆಗ ಶಾಂತವಾಗಿದ್ದರು. ಬಿಜೆಪಿ ಸರ್ಕಾರದ ಅವಧಿಯಲ್ಲೇ ಹೆಚ್ಚು ಸಮಸ್ಯೆಯಾಗಿದೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಸರ್ಕಾರವಿದ್ದಾಗಲೇ ಹೆಚ್ಚು ಹಿಂದೂಗಳ ಕೊಲೆಯಾಗಿದೆ ಎನ್ನುವ ಕಟೀಲ್ ಹೇಳಿಕೆ ತಿರುಗೇಟು ನೀಡಿ, ನಳಿನ್ ಕುಮಾರ್ ಕಟೀಲ್ ಮಾತಿಗೆ ಹೆಚ್ಚು ಮಹತ್ವ ಕೊಡುವ ಅವಶ್ಯಕತೆಯಿಲ್ಲ ಎಂದರು.