ಬೆಳಗಾವಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಸಚಿವ ಸತೀಶ್ ಜಾರಕಿಹೊಳಿ ಭರ್ಜರಿ ಪ್ಲಾನ್ ಮಾಡ್ತಿದ್ದು, ಬೆಳಗಾವಿ, ಚಿಕ್ಕೋಡಿ ಲೋಕಸಭೆ ಗೆಲ್ಲಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದ್ದಾರೆ.
ಬಿಜೆಪಿ ವಿರುದ್ಧ ಜಾತಿ ಅಸ್ತ್ರ ಪ್ರಯೋಗ ಹಿನ್ನೆಲೆ ಲಿಂಗಾಯತ, ಕುರುಬ ಸಮುದಾಯದ ಅಭ್ಯರ್ಥಿಗಳನ್ನ ಅಖಾಡಕ್ಕಿಳಿಸಲು ಪ್ಲಾನ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಬೆಳಗಾವಿ, ಚಿಕ್ಕೋಡಿ ಎರಡು ಲೋಕಸಭೆಯಲ್ಲಿ ಲಿಂಗಾಯತ, ಕುರುಬ ಮತಗಳು ನಿರ್ಣಾಯಕವಾಗಲಿದ್ದು, ಸದ್ಯಕ್ಕೆ ಕಾಂಗ್ರೆಸ್ ನಲ್ಲಿ ಇಬ್ಬರೂ ಆಕಾಂಕ್ಷಿಗಳಿಂದ ಬಹಿರಂಗವಾಗಿಯೇ ಲಾಬಿ ನಡೆಯುತ್ತಿದೆ. ಬೆಳಗಾವಿ ಲೋಕಸಭೆಗೆ ಕಿರಣ ಸಾಧುನವರ, ಚಿಕ್ಕೋಡಿ ಲೋಕಸಭೆಗೆ ಲಕ್ಷ್ಮಣರಾವ್ ಚಿಂಗಳೆ ಲಾಬಿ ಮಾಡ್ತಿದ್ದು, ಇಬ್ಬರೂ ಆಕಾಂಕ್ಷಿಗಳು ಸಚಿವ ಸತೀಶ್ ಜಾರಕಿಹೊಳಿ ಆಪ್ತರು ಎಂದು ಹೇಳಲಾಗಿದೆ.
ಇದನ್ನೂ ಓದಿ : ನಮ್ಮ ಪ್ರಣಾಳಿಕೆಗಳನ್ನು ಬಿಜೆಪಿ ಕಾಪಿ ಮಾಡ್ತಿದೆ: ಶಾಮನೂರು ಶಿವಶಂಕರಪ್ಪ
ಲೋಕಸಭೆಗೆ ಜಾರಕಿಹೊಳಿ, ಸಚಿವೆ ಹೆಬ್ಬಾಳಕರ ಕುಟುಂಬದಿಂದ ಯಾರು ಟಿಕೆಟ್ ಕೇಳಿಲ್ಲ. ಜನಪ್ರಿಯತೆ ಇರೋ ನಾಯಕನಿಗೆ ಟಿಕೆಟ್ ಸಿಗಲಿದೆ. ಅಭ್ಯರ್ಥಿ ಆಯ್ಕೆ ಮೂರು ಹಂತದಲ್ಲಿ ನಡೆಯಲಿದ್ದು, ಡಿಸೆಂಬರ್ ನಲ್ಲಿ ಬೆಳಗಾವಿ ಜಿಲ್ಲೆ ಕೈ ನಾಯಕರ ಸಭೆಯಲ್ಲಿ ಅಭ್ಯರ್ಥಿಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ.
ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸಲು ಹೈಕಮಾಂಡ್ ತಯಾರಿ ನಡೆಸುವಂತೆ ಎಲ್ಲರಿಗೂ ಸೂಚನೆ ನೀಡಿದ್ದಾರೆಯೇ ಹೊರತು, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಎಂದು ಹೈಕಮಾಂಡ್ ನನಗೆ ಹೇಳಿಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದರು. ಗೆಲ್ಲುವ ಅಭ್ಯರ್ಥಿಗೆ ಮಣೆ ಹಾಕಿ ಅವರಿಗೆ ಅವಕಾಶ ಕೊಡುತ್ತೇವೆ. ವಿಧಾನಸಭಾ ಚುನಾವಣೆಯ ಮಾದರಿಯಲ್ಲಿ ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಎದುರಿಸಲಿದೆ. ಆದರೆ ಈ ಚುನಾವಣೆಯಲ್ಲಿ ಹೆಚ್ಚಿನ ಜವಾಬ್ದಾರಿ ಇದೆ ಎಂದಿದ್ದರು.