ನವದೆಹಲಿ : ಸನಾತದ ಧರ್ಮದ ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಸುಪ್ರೀಂ ಕೋರ್ಟ್ ವಕೀಲರೊಬ್ಬರು ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ.
ಉದಯನಿಧಿ ಸ್ಟಾಲಿನ್ ತಮ್ಮ ಭಾಷಣದಲ್ಲಿ ಸನಾತನ ಧರ್ಮದ ವಿರುದ್ಧ ಪ್ರಚೋದನಕಾರಿ ಮತ್ತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ವಿನೀತ್ ಜಿಂದಾಲ್ ಎಂಬ ಸುಪ್ರೀಂ ಕೋರ್ಟ್ ವಕೀಲ ದೂರು ನೀಡಿದ್ದು, ಎಫ್ಐಆರ್ ದಾಖಲಿಸಲು ಆಗ್ರಹಿಸಿದ್ದಾರೆ.
ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ಡೆಂಗ್ಯೂ, ಕೊರೋನಾ ಮತ್ತು ಮಲೇರಿಯಾಗೆ ಹೋಲಿಸಿರುವುದಲ್ಲದೆ, ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ನೀಡಿರುವುದುದರಿಂದ ಸನಾತನ ಧರ್ಮದ ಅನುಯಾಯಿಯಾದ ನನ್ನ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ದೂರುದಾರ ವಕೀಲ ವಿನೀತ್ ಜಿಂದಾಲ್ ಹೇಳಿದ್ದಾರೆ.
ಇದನ್ನೂ ಓದಿ : ‘ಭಾರತ ಹಿಂದೂ ರಾಷ್ಟ್ರವಲ್ಲ, ಎಂದಿಗೂ ಆಗಿರಲಿಲ್ಲ’
ಉದಯನಿಧಿಯವರ ಮಾತುಗಳು ಸನಾತನ ಧರ್ಮದ ಮೇಲಿನ ದ್ವೇಷವನ್ನು ತೋರಿಸುತ್ತದೆ. ಅವರು ಸಂವಿಧಾನದ ಪ್ರಕಾರ ಕೆಲಸ ಮಾಡುವ ಪ್ರಮಾಣ ವಚನ ಸ್ವೀಕರಿಸಿರುವ ತಮಿಳುನಾಡು ಸರ್ಕಾರದ ಸಚಿವರಾಗಿದ್ದಾರೆ. ಹಾಗಾಗಿ, ಎಲ್ಲಾ ಧರ್ಮಗಳನ್ನು ಗೌರವಿಸುವುದು ಅವರ ಕರ್ತವ್ಯ. ಆದರೆ, ಉದಯನಿಧಿ ಅವರು ಉದ್ದೇಶಪೂರ್ವಕವಾಗಿ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಉದ್ದೇಶದಿಂದ ಸನಾತನ ಧರ್ಮದ ವಿರುದ್ಧ ಪ್ರಚೋದನಕಾರಿ ಮತ್ತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ವಕೀಲ ವಿನೀತ್ ಆರೋಪಿಸಿದ್ದಾರೆ.
ಉದಯನಿಧಿ ಸ್ಟಾಲಿನ್ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ ಮತ್ತು ಬಿ, 295ಎ, 298 ಮತ್ತು 505ರ ಪ್ರಕಾರ ಅಪರಾಧ ಎಸಗಿದ್ದಾರೆ. ಅವು ಗುರುತಿಸಬಹುದಾದ ಮತ್ತು ಅತ್ಯಂತ ಗಂಭೀರ ಸ್ವರೂಪದ ಅಪರಾಧಗಳಾಗಿವೆ. ಆದ್ದರಿಂದ, ಮೇಲೆ ಹೇಳಿದ ಸೆಕ್ಷನ್ ಗಳ ಅಡಿಯಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ದೂರುದಾರ ವಕೀಲ ಆಗ್ರಹಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.