ಬೆಂಗಳೂರು: ದಶಕಗಳಿಂದ ತಿರುಪತಿಗೆ ಸರಬರಾಜಾಗುತ್ತಿದ್ದ ನಂದಿನಿ ತುಪ್ಪ ಖರೀದಿಯನ್ನು ಟಿಟಿಡಿ ಸ್ಥಗಿತಗೊಳಿಸಿತ್ತು. ಕೆಎಂಎಫ್ ಸಲ್ಲಿಸಿದ್ದ ಪರಿಷ್ಕೃತ ದರಕ್ಕೆ ಒಪ್ಪಿಗೆ ನೀಡದ ಟಿಟಿಡಿ ನಂದಿನಿ ತುಪ್ಪವೇ ಬೇಡ ಅಂತ ನಿರಾಕರಿಸಿತ್ತು. ಆದ್ರೆ ಸ್ಪರ್ಧಾತ್ಮಕ ದರದಲ್ಲಿ ತುಪ್ಪ ನೀಡುತ್ತಾ ಬಂದಿದ್ದ ಕೆಎಂಎಫ್ ಈ ಬಾರಿ ಟಿಟಿಡಿ ದರಕ್ಕೆ ಒಪ್ಪಿಗೆ ನೀಡದೆ ಲಾಭವಾದರೆ ನಮ್ಮ ರೈತರಿಗೇ ಆಗಲಿ ಎಂಬ ನಿಲುವು ತಾಳಿತ್ತು. ಹೀಗಾಗಿ 50 ವರ್ಷಗಳ ತಿರುಪತಿಯೊಂದಿಗಿನ ನಂದಿನಿಯ ಸಂಬಂಧ ಕಡಿತಗೊಂಡಿತ್ತು.
ಆದರೆ ಬಳಿಕ ರಾಜ್ಯ ಸರ್ಕಾರವೂ ಸೇರಿದಂತೆ ಕೆಎಂಎಫ್ ಟಿಟಿಡಿ ಜೊತೆ ಮಾತುಕತೆಗೆ ಮುಂದಾಗಿತ್ತು. ಮತ್ತೆ ತುಪ್ಪ ಖರೀದಿಸುವಂತೆ ಮನವಿ ಮಾಡಿತ್ತು. ಈ ಸಂಬಂಧ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಸಹ ಪತ್ರ ಬರೆದು ಮತ್ತೆ ತುಪ್ಪ ರಫ್ತಿಗೆ ಕೆಎಂಎಫ್ ಸಿದ್ಧವಿದೆ ಎಂದು ತಿಳಿಸಲಾಗಿತ್ತು. ಆದ್ರೆ ಈ ಪತ್ರ ತಲುಪಿ 20 ದಿನ ಕಳೆದರೂ ಟಿಟಿಡಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಕೆಎಂಎಫ್ ತಿಳಿಸಿತ್ತು. ಇದರರ್ಥ ಟಿಟಿಡಿ ರಾಜ್ಯದ ನಂದಿನಿ ತುಪ್ಪ ಬಳಕೆಯಲ್ಲಿ ಆಸಕ್ತಿ ಹೊಂದಿಲ್ಲ ಎಂದು ಪರೋಕ್ಷವಾಗಿ ತಿಳಿಸಿತ್ತು.
ಇದನ್ನೂ ಓದಿ: ಟಿಟಿಡಿ ಆಡಳಿತ ಮಂಡಳಿಯಲ್ಲಿ ಸ್ಥಾನ ಪಡೆದ ಆರ್ ವಿ ದೇಶಪಾಂಡೆ
ಇಷ್ಟೆಲ್ಲಾ ಆಗು-ಹೋಗುಗಳ ನಡುವೆ ಟಿಟಿಡಿಗೆ ಆಡಳಿತ ಮಂಡಳಿಯ ಸದಸ್ಯರನ್ನಾಗಿ ಮಾಜಿ ಸಚಿವ ಹಾಗೂ ಹಳಿಯಾಳದ ಶಾಸಕ ಆರ್.ವಿ. ದೇಶಪಾಂಡೆ ಅವರನ್ನು ನೇಮಕ ಮಾಡಿದೆ. ಹೀಗಾಗಿ ನಂದಿನಿ ತುಪ್ಪ ಖರೀದಿ ಸಂಬಂಧ ಟಿಟಿಡಿ ನಡುವಿನ ಸಮಸ್ಯೆ ನಿವಾರಣೆಯಾಗಲಿದ್ಯಾ ಎಂಬ ಆಶಾಭಾವ ಹುಟ್ಟಿಕೊಂಡಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್. ಜಗನ್ ಮೋಹನ್ ರೆಡ್ಡಿ ಶುಕ್ರವಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಆರ್.ವಿ ದೇಶಪಾಂಡೆ, ಎಸ್.ಆರ್.ವಿಶ್ವನಾಥ್‌ಗೆ ಆಡಳಿತ ಮಂಡಳಿಯಲ್ಲಿ ಸ್ಥಾನ ನೀಡಲಾಗಿದೆ. ರಾಜ್ಯ ನಾಯಕರು ಆಡಳಿತ ಮಂಡಳಿಯಲ್ಲಿ ಸ್ಥಾನ ಪಡೆಯುತ್ತಿದ್ದಂತೆ ಮತ್ತೆ ಡಿಡಿಟಿ ನಂದಿನಿ ಜೊತೆ ಒಪ್ಪಂದಕ್ಕೆ ಮುಂದಾಗಲಿದ್ಯಾ ಎಂಬ ಪ್ರಶ್ನೆ ಎದುರಾಗಿದೆ.
ಕುಳಿತು ದರ ನಿಗದಿ ಮಾಡೋಣ ಎಂದಿದ್ದ ಕೆಎಂಎಫ್!
ತುಪ್ಪ ಖರೀದಿ ಸಂಬಂಧ ಟಿಟಿಡಿಗೆ ಪತ್ರ ಬರೆದಿದ್ದ ಕೆಎಂಎಫ್ ಮಂಡಳಿ ಒಪ್ಪಿದರೆ ಕುಳಿತು ದರ ನಿಗದಿ ಮಾಡಲು ನಿದ್ಧರಿರುವುದಾಗಿ ತಿಳಿಸಿತ್ತು. ಜೊತೆಗೆ ಸ್ಪರ್ಧಾತ್ಮಕ ದರದಲ್ಲಿಯೇ ತುಪ್ಪ ಪೂರೈಕೆಗೆ ತಯಾರಿರುವುದಾಗಿಯೂ ತಿಳಿಸಿತ್ತು. ಆದರೆ ಟಿಟಿಡಿ ಈ ಕುರಿತು ಪ್ರತಿಕ್ರಿಯಿಸದ ಹಿನ್ನೆಲೆ ಮಾತುಕತೆ ನಡೆಯದೆ ಕಂದಕ ಮತ್ತಷ್ಟು ದೊಡ್ಡದಾಗಿತ್ತು. ಸದ್ಯ ಈಗ ರಾಜ್ಯ ಪ್ರಭಾವಿ ನಾಯಕರು ಟಿಟಿಡಿ ಮಂಡಳಿಯಲ್ಲಿ ಸ್ಥಾನ ಪಡೆದಿರುವುದರಿಂದಾಗಿ ಮತ್ತೆ ಮಾತುಕತೆ ನಡೆಸಬಹುದಾದ ಸಾಧ್ಯತೆ ಹೆಚ್ಚಾಗಿದೆ.
ಇದನ್ನೂ ಓದಿ: ‘ಸರ್ಕಾರ ಕೊಡುವ ಅಕ್ಕಿ ಪ್ರಾಣಿ-ಪಕ್ಷಿ ಕೂಡ ಮುಟ್ಟಲ್ಲ’
ನಂದಿನಿ ತುಪ್ಪ ಬೇಡ ಎಂದಿದ್ಯಾಕೆ ಟಿಟಿಡಿ?
ಕಳೆದ 2022ರ ಆಗಸ್ಟ್‌ನಲ್ಲಿ ಕೆಎಂಎಫ್ ಹೊಸ ದರ ನಿಗದಿಗೊಳಿಸಿತ್ತು. ಆದರೆ ಇ-ಪ್ರೊಕ್ಯೂರ್‌ಮೆಂಟ್ ಸೈಟ್ ಮೂಲಕ ಕಡಿಮೆ ಬೆಲೆಯನ್ನು ನಮೂದಿಸಿದ್ದ ಟಿಟಿಡಿ ಕಡಿಮೆ ದರಕ್ಕೆ ತುಪ್ಪ ನೀಡುವಂತೆ ತಿಳಿಸಿತ್ತು.
ನಂದಿನಿ ತುಪ್ಪದ ಉತ್ಪಾದನಾ ವೆಚ್ಚ ಗಣನೀಯವಾಗಿ ಏರಿಕೆಯಾಗಿದ್ದ ಹಿನ್ನೆಲೆ ಕೆಎಂಎಫ್ ತುಪ್ಪದ ದರ ಅನಿವಾರ್ಯವಾಗಿ ಹೆಚ್ಚಿಸಿತ್ತು. ಟಿಟಿಡಿಯ 2022-23 ಸಾಲಿನ ಟೆಂಡರ್‌ನಲ್ಲಿ ಪ್ರತಿ ಕೆ.ಜಿ ತುಪ್ಪಕ್ಕೆ ಸುಮಾರು 450 ರೂ.ಗೆ ಕೆಎಂಎಫ್ ಬಿಡ್ ಮಾಡಿತ್ತು. ಟೆಂಡರ್‌ನಲ್ಲಿ ಬೇರೆ ಏಜೆನ್ಸಿಗಳು ಕೆಎಂಎಫ್ ನಿಗದಿ ಮಾಡಿದ್ದ ದರಕ್ಕಿಂತಲೂ ಕಡಿಮೆ ದರಕ್ಕೆ ತುಪ್ಪ ಸರಬರಾಜು ಮಾಡುವುದಾಗಿ ಮುಂದೆ ಬಂದಿದ್ದವು. ಹೀಗಾಗಿ ನಂದಿನಿ ತುಪ್ಪದ ಬದಲಾಗಿ ಟಿಟಿಡಿ ಬೇರೆ ತುಪ್ಪ ಆಮದು ಮಾಡಿಕೊಳ್ಳಲು ನಿರ್ಧರಿಸಿತ್ತು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.