ಕಲಬುರಗಿ: ಬಿಜೆಪಿಯವರಿಗೆ ಅಭಿವೃದ್ಧಿ ಮುಖ್ಯವಲ್ಲ, ಬೇರೆ ಪಕ್ಷ ದುರ್ಬಲಗೊಳಿಸುವುದೇ ಮುಖ್ಯವಾಗಿದೆ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕೆಲವು ರಾಜಕೀಯವಾಗಿ ದಾಳಿಗಳು ನಡೆಯುತ್ತಿವೆ. ಸದ್ಯ ದೇಶದಲ್ಲಿ ಸರಿಯಾದ ವಾತಾವರಣ ಇಲ್ಲ ಎಂದು ಟೀಕಿಸಿದರು.
ಇನ್ನು ನಾವು ದೇಶದ್ರೋಹಿ ಕೆಲಸ ಮಾಡುವವರಿಗೆ ರಕ್ಷಣೆ ಕೊಡುವವರಲ್ಲ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಕೊಡಿ, ಆದ್ರೆ ಅನಾವಶ್ಯಕವಾಗಿ ಯಾರಿಗೂ ತೊಂದರೆ ಕೊಡಬೇಡಿ. ದೇಶದಲ್ಲಿ ಅಶಾಂತಿ ಉಂಟು ಮಾಡುವ ಬಗ್ಗೆ ನಾವು ಎಂದಿಗೂ ಸಹಿಸೋದಿಲ್ಲ. ಕೋವಿಡ್ ನಿಂದ ದೇಶದಲ್ಲಿ ಜನ ತತ್ತರಿಸಿ ಹೋಗಿದ್ದಾರೆ. ಅದೇಷ್ಟೋ ಜನ ಹಸಿವಿನಿಂದ ಈಗಲೂ ಸಾಯುತ್ತಿದ್ದಾರೆ. ಇದರ ಬಗ್ಗೆ ಗಮನ ಹರಿಸೋ ಬದಲು ಚೀತಾ ತಂದಿದ್ದಾರೆ. ಚೀತಾ ತಂದ್ರು ಏನು ಪ್ರಯೋಜನ ಇಲ್ಲ. ತರದೆ ಇದ್ದರೂ ಏನೂ ಲಾಸ್ ಆಗ್ತಿರಲಿಲ್ಲ ಎಂದು ಪ್ರಧಾನಿ ಮೋದಿ ನಡೆಗೆ ಖರ್ಗೆ ಟೀಕೆ ವ್ಯಕ್ತಪಡಿಸಿದ್ರು.
ಒಬ್ಬರನ್ನೊಬ್ಬರು ಮುಗಿಸುವಂತಹದ್ದು ಕೆಲಸ ನಡಿಯುತ್ತಿದೆ, ಯಾವ ಉದ್ದೇಶಕ್ಕಾಗಿ ಎನ್ಐಎ ದಾಳಿ ಮಾಡ್ತಾರೆ ಅಂತಾ ನಮಗೆನೂ ಹೇಳಿಲ್ಲ. ಮಾಧ್ಯಮದಲ್ಲಿ ಬಂದಿಲ್ಲ.. ಯಾರು ದೇಶದ್ರೋಹಿ ಕೆಲಸ ಮಾಡ್ತಾರೆ, ಅವರ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಅಧಿಕಾರ ಇದೆ. ಆದರೆ ಯಾವುದೇ ಸಂಸ್ಥೆ ಮೇಲೆ ಕ್ರಮ ತೆಗೆದುಕೊಳ್ಳುವಾಗ ಸಾಧಕ – ಬಾಧಕ ನೋಡಬೇಕು.
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಸಿಎಂ ಬೊಮ್ಮಾಯಿ 5 ಸಾವಿರ ಕೋಟಿ ಕೊಡುವುದಾಗಿ ಹೇಳಿಕೆ ವಿಚಾರವಾಗಿ ಮಾತನಾಡಿದ ಖರ್ಗೆ ಅವರು, ಸಿಎಂ 5 ಸಾವಿರ ಕೋಟಿ ಕೊಡುತ್ತೇನೆ ಅಂತಾ ಹೇಳಿದ್ದಾರೆ. ಅದಕ್ಕೆ ನಾವು ಸ್ವಾಗತ ಮಾಡುತ್ತೇವೆ. ಹೇಳಿಕೆ ಕೊಟ್ಟು ಕಡಿಮೆ ಹಣ ಬಿಡುಗಡೆ ಮಾಡದೆ, ಹೇಳಿದಷ್ಟು ಹಣ ಕೊಡಬೇಕು ಎಂದರು.