ಬೆಂಗಳೂರು: ಅನಾರೋಗ್ಯದ ಹಿನ್ನೆಲೆ ಮಾಜಿ ಸಿಎಂ ಹಾಗೂ ಬಿಜೆಪಿ ಹಿರಿಯ ನಾಯಕ ಎಸ್.ಎಂ.ಕೃಷ್ಣ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಹಾಗು ಸಚಿವ ಕೆ.ಸುಧಾಕರ್ ಎಸ್.ಎಂ.ಕೃಷ್ಣ ಅವರ ಆರೋಗ್ಯ ವಿಚಾರಿಸಿದ್ದಾರೆ.
ಬಳಿಕ ಸಿಎಂ ಬೊಮ್ಮಾಯಿ ಮಾಧ್ಯಮದವರೊಂದಿಗೆ ಮಾತನಾಡಿ, ಮಾಜಿ ಸಿಎಂ ಹಾಗೂ ಬಿಜೆಪಿ ಹಿರಿಯ ನಾಯಕ ಎಸ್.ಎಂ.ಕೃಷ್ಣ ಚೇತರಿಸಿಕೊಳ್ಳುತ್ತಿದ್ದು, ಯಾರೂ ಆತಂಕಪಡುವ ಅಗತ್ಯ ಇಲ್ಲ. ರಾಜ್ಯದ ಹಿರಿಯ ನಾಯಕ ಎಸ್ ಎಂ ಕೃಷ್ಣ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ವೈದೇಹಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಯಿತು. ನಿರಂತರ ಚಿಕಿತ್ಸೆಯಿಂದ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಎರಡು ಮೂರು ದಿನಗಳಲ್ಲಿ ಅವರು ಡಿಸ್ಚಾರ್ಜ್ ಆಗುತ್ತಾರೆಂದು ಹೇಳಿದರು. ಆರೋಗ್ಯ ಸಚಿವ ಸುಧಾಕರ್ ಕೂಡ ವೈದ್ಯರಿಂದ ವೈದ್ಯಕೀಯ ವಿವರದ ಮಾಹಿತಿ ಪಡೆದರು. 90 ವರ್ಷದ ಎಸ್.ಎಂ.ಕೃಷ್ಣ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಆರೋಗ್ಯದ ಬಗ್ಗೆ ಯಾವುದೇ ವದಂತಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದ್ರು. ಇನ್ನು ಎಸ್.ಎಂ.ಕೃಷ್ಣ ಅವರ ಆಪ್ತ ಕಾರ್ಯದರ್ಶಿ ಪ್ರತಿಕ್ರಿಯೆ ನೀಡಿದ್ದು, ಎಸ್. ಎಂ. ಕೃಷ್ಣ ಅವರಿಗೆ ರಾತ್ರಿ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೋವಿಡ್ ಮತ್ತು ಇತರ ಪರೀಕ್ಷೆ ಮಾಡಲಾಗಿದೆ. ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಯಾರೂ ಸಹ ಆಸ್ಪತ್ರೆ ಬಳಿ ಬರಬೇಡಿ. ಉಹಾಪೋಹದ ಮಾಹಿತಿಗಳನ್ನು ಹಬ್ಬಿಸಬಾರದು ಎಂದರು.