ದಾವಣಗೆರೆ: ರಾಜ್ಯ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಗಳನ್ನು ಈಗ ನಡೆಯುತ್ತಿರುವ ಪಂಚ ರಾಜ್ಯಗಳ ಚುನಾವಣೆಯಲ್ಲಿ ಅನೇಕ ಪಕ್ಷಗಳು ನಕಲು ಮಾಡಿಕೊಳ್ಳುತ್ತಿವೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ತಾಲೂಕಿನ ಕುಕ್ಕವಾಡ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ನಮ್ಮ ಪ್ರಣಾಳಿಕೆಯಲ್ಲಿನ ಜನಪರ ವಿಚಾರಗಳನ್ನು ಹಾಗೂ ಯೋಜನೆಗಳನ್ನು ಪಂಚರಾಜ್ಯ ಚುನಾವಣೆಗಳಲ್ಲಿ ಬಳಸಿಕೊಳ್ಳುತ್ತಿರುವುದರಿಂದ ನಮ್ಮ ರಾಜ್ಯ ಸರ್ಕಾರದ ಆಡಳಿತ ದೇಶಕ್ಕೆ ಮಾದರಿಯಾಗಿದೆ ಎಂದು ಸರ್ಕಾರದ ಬೆನ್ನು ತಟ್ಟಿದ್ದಾರೆ.
ಇದನ್ನೂ ಓದಿ : ಸ್ಮಾರಕಗಳ ದತ್ತು ಪಡೆದವರಿಗೆ ಬಹುಮಾನ: ಹೆಚ್.ಕೆ.ಪಾಟೀಲ್
ನಮ್ಮ ಸರ್ಕಾರ ಅತ್ಯಂತ ಜನಪರವಾಗಿ ಆಡಳಿತ ನೀಡುತ್ತಿದೆ. ಎಲ್ಲ ವರ್ಗದವರ ಏಳ್ಗೆಗೆ ಶ್ರಮಿಸುವುದು ಕಾಂಗ್ರೆಸ್‌ನ ಧ್ಯೇಯ. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುನ್ನಡೆಯುತ್ತಿದೆ. ದೇಶದ ಯಾವುದೇ ರಾಜ್ಯದಲ್ಲಿ ನೀಡದಿರುವ ಭರವಸೆಗಳನ್ನು ನೀಡುವುದಲ್ಲದೆ, ಅವುಗಳನ್ನು ಜಾರಿಗೆ ತಂದ ಶ್ರೇಯಸ್ಸು ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದು ತಿಳಿಸಿದ್ದಾರೆ.
ಅಭಿವೃದ್ದಿಯ ಕಡೆಗೆ ಗಮನ ಹರಿಸುವ ಸರ್ಕಾರ ಯಾವುದಾದರೂ ಇದ್ದರೆ, ಅದು ಕರ್ನಾಟಕದ ಕಾಂಗ್ರೆಸ್ ಸರ್ಕಾರವಾಗಿದೆ. ಆದರೆ, ನಮ್ಮಲ್ಲಿ ರಾಜ್ಯ ಸರ್ಕಾರವನ್ನು ಟೀಕಿಸುವ ಬಿಜೆಪಿಯವರು ಈಗ ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಹೋಗಿ ನಮ್ಮ ಮಾದರಿ ಆಡಳಿತದ ಭರವಸೆ ನೀಡುತ್ತಿದ್ದಾರೆ ಎಂದು ಕುಟುಕಿದ್ದಾರೆ.
ನನ್ನ ಕ್ಷೇತ್ರದಲ್ಲಿ ಕಳೆದ 8 ತಿಂಗಳ ಹಿಂದೆ ಈ ಭಾಗದ ಅನೇಕ ರಸ್ತೆಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿತ್ತು. ಕೆಲವು ತಾಂತ್ರಿಕ ತೊಂದರೆಗಳಿಂದಾಗಿ ಈ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಿಲ್ಲ. ಇದೀಗ ರಸ್ತೆಗಳನ್ನು ಸಂಪೂರ್ಣ ಅಭಿವೃದ್ಧಿ ಮಾಡುವ ಉದ್ದೇಶದಿಂದ ಲೋಕೋಪಯೋಗಿ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.