ಮುಂಬೈ: ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವವನ್ನು ಅನರ್ಹಗೊಳಿಸಿರುವುದು ಸಂವಿಧಾನಬಾಹಿರ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿ, ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ಅನರ್ಹಗೊಳಿಸಿರುವುದು ಸಂವಿಧಾನಬಾಹಿರ. ಪ್ರಜಾಪ್ರಭುತ್ವ ಮೌಲ್ಯಗಳ ಮೇಲಿನ ದಾಳಿಯಾಗಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಜೊತೆಗೆ ಲಕ್ಷದ್ವೀಪದ ತಮ್ಮ ಪಕ್ಷದ ಸಂಸದ ಮೊಹಮ್ಮದ್ ಫೈಜಲ್ ಪಿಪಿ ಅವರನ್ನು ಕೊಲೆ ಯತ್ನ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ಅನರ್ಹಗೊಳಿಸಲಾಗಿತ್ತು. ನಂತರ ಕೇರಳ ಹೈಕೋರ್ಟ್ ಫೈಝಲ್‌ನ ಶಿಕ್ಷೆಯನ್ನು ಅಮಾನತುಗೊಳಿಸಿತ್ತು ಎಂದು ಉಲ್ಲೇಖಿಸಿದ್ದಾರೆ.
2019 ರ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ಕೋರ್ಟ್‌ನಿಂದ ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿ ಲೋಕಸಭೆಯಿಂದ ಅನರ್ಹರಾಗಿದ್ದಾರೆ. 2 ವರ್ಷಗಳ ಕಾಲ ಶಿಕ್ಷೆ ಒಳಗಾಗಿರುವ ಕಾರಣ ಅನರ್ಹಗೊಳಿಸಲಾಗಿದೆ. ರಾಹುಲ್ ಗಾಂಧಿ ಕೇರಳದ ವಯನಾಡ್ ಕ್ಷೇತ್ರದ ಲೋಕಸಭಾ ಸದಸ್ಯರಾಗಿದ್ದಾರೆ.