ಮುಂಬೈ: ಹಾಲಿ ಅಧ್ಯಕ್ಷ ಶರದ್ ಪವಾರ್ ರಾಜೀನಾಮೆಯನ್ನು ತಿರಸ್ಕರಿಸಿದೆ ಎಂದು ಪಕ್ಷದ ಹಿರಿಯ ನಾಯಕ ಪ್ರಫುಲ್ ಪಟೇಲ್ ಹೇಳಿದ್ದಾರೆ.
“ಸಮಿತಿಯು ಸರ್ವಾನುಮತದಿಂದ ಶರದ್ ಪವಾರ್ ಅವರ ರಾಜೀನಾಮೆ ತಿರಸ್ಕರಿಸಿ ನಿರ್ಣಯ ಅಂಗೀಕರಿಸಿದೆ. ಇದು ಅವರ ರಾಜೀನಾಮೆ ನಿರ್ಧಾರವನ್ನು ಸರ್ವಾನುಮತದಿಂದ ತಿರಸ್ಕರಿಸುತ್ತದೆ ಮತ್ತು ಪಕ್ಷದ ಅಧ್ಯಕ್ಷರಾಗಿ ಮುಂದುವರಿಯುವಂತೆ ಒತ್ತಾಯಿಸುತ್ತದೆ” ಎಂದು ತಿಳಿಸಿದ್ದಾರೆ.
“ನಾವು ಈ ನಿರ್ಣಯದೊಂದಿಗೆ ಪವಾರ್ ಸಾಹೇಬ್ ಅವರನ್ನು ಭೇಟಿ ಮಾಡುತ್ತೇವೆ ಮತ್ತು ಅವರ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡುತ್ತೇವೆ” ಎಂದು ಹೇಳಿದ್ದಾರೆ. ಶರದ್ ಪವಾರ್ ಅವರು ಮೇ 2 ರಂದು ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ನಂತರ ಸ್ವತಃ ಶರದ್ ಪವಾರ್ ಅವರೇ ನೂತನ ಅಧ್ಯಕ್ಷರ ನೇಮಕ ಸಂಬಂಧ ಅಜಿತ್ ಪವಾರ್, ಸುಪ್ರಿಯಾ ಸುಳೆ, ಮಾಜಿ ಕೇಂದ್ರ ಸಚಿವ ಪರ್ಫುಲ್ ಪಟೇಲ್ ಮತ್ತು ಛಗನ್ ಭುಜಬಲ್ ಒಳಗೊಂಡ ಸಮಿತಿ ರಚಿಸಿದ್ದರು.
ಪಾರ್ಟಿಯಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಲು, ಮಾರ್ಗದರ್ಶನ ನೀಡಲು ಶರದ್ ಪವಾರ್ ಮುಖ್ಯಸ್ಥರಾಗಿ ಮುಂದುವರಿಯಬೇಕು ಎಂದು ನಿರ್ಣಯ ತೆಗೆದುಕೊಳ್ಳಲಾಗಿದೆ. ಇನ್ನೂ ಶರದ್ ಪವಾರ್ ರಾಜೀನಾಮೆ ಹಿಂಪಡೆಯದಿದ್ದರೆ ಸುಪ್ರಿಯಾ ಸುಳೆ ಅವರಿಗೆ ಎನ್‌ಸಿಪಿ ಅಧ್ಯಕ್ಷ ಸ್ಥಾನ ನೀಡಲಾಗುವುದು ಎಂದು ಹೇಳಲಾಗುತ್ತಿದೆ.