ಬೆಂಗಳೂರು: ಮಾಜಿ ಸಿಎಂ ದಿ. ರಾಮಕೃಷ್ಣ ಹೆಗಡೆ ಮೊಮ್ಮಗ, ಜೆಡಿಎಸ್ ಮುಖಂಡ ಶಶಿಭೂಷಣ್ ಹೆಗಡೆ ಬಿಜೆಪಿ ಸೇರಿದ್ದಾರೆ.
ಜೆಡಿಎಸ್ ತೊರೆದು ಶಶಿಭೂಷಣ್ ಹೆಗಡೆ ಬಿಜೆಪಿ ಸೇರಿದ್ದು, ಬೆಂಗಳೂರಿನ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪಕ್ಷದ ಬಾವುಟ ನೀಡಿ ಬರಮಾಡಿಕೊಂಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಮ್ಮತ ಅಭ್ಯರ್ಥಿ ಆಗುವಂತೆ ಒತ್ತಡ ಹಾಕಿದ್ದರು ಶಶಿಭೂಷಣ್ ಒಪ್ಪಿರಲಿಲ್ಲ.
ಮಾಜಿ ಸಿಎಂ ದಿ.ರಾಮಕೃಷ್ಣ ಹೆಗಡೆ ಅವರ ಅಣ್ಣ ಗಣೇಶ ಹೆಗಡೆ ಅವರ ಮೊಮ್ಮಗ ಶಶಿಭೂಷಣ್ ಹೆಗಡೆ ಈ ಹಿಂದೆ ಬಿಜೆಪಿಯಲ್ಲಿಯೇ ಇದ್ದು, ಕುಮಟಾ ಕ್ಷೇತ್ರದಿಂದ ಎರಡು ಬಾರಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಅಲ್ಪ ಮತದಲ್ಲಿಯೇ ಎರಡು ಬಾರಿ ಸೋಲನ್ನು ಕಂಡಿದ್ದರು. ತನ್ನ ಸೋಲಿಗೆ ಕೆಲ ಸ್ವಪಕ್ಷೀಯ ನಾಯಕರೇ ಕಾರಣ ಎಂದು ಬೇಸರಗೊಂಡು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.
‘ಆತ್ಮೀಯರೇ , ನನ್ನೆಲ್ಲ ಆತ್ಮೀಯರು , ಹಿತೈಷಿಗಳು , ಬೆಂಬಲಿಗರ ಅಭಿಪ್ರಾಯ ಮತ್ತು ನಾಡಿನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಸವರಾಜ ಬೊಮ್ಮಾಯಿ, ಶ್ರೀಯುತ ಬಿ. ಎಸ್. ಯಡಿಯೂರಪ್ಪಅವರು, ಗೋವಿಂದ ಕಾರಜೋಳ , ಶೋಭಾ ಕರಂದ್ಲಾಜೆ, ಬಸವರಾಜ ಹೊರಟ್ಟಿ ಹಾಗೂ ಬಿಜೆಪಿಯ ಜಿಲ್ಲೆಯ ಅನೇಕ ನಾಯಕರ ಆತ್ಮೀಯ ಆಹ್ವಾನದ ಮೇರೆಗೆ ಹಲವು ಜನ ಸಂಗಡಿಗರೊಂದಿಗೆ ದೇಶದ ಅಪ್ರತಿಮ ನೇತಾರ ಸನ್ಮಾನ್ಯ ನರೇಂದ್ರ ಮೋದಿಜಿ ಅವರ ಪ್ರೇರಣೆಯೊಂದಿಗೆ ಇಂದು ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ . ಹಿಂದಿನಂತೆ ನನ್ನೆಲ್ಲ ಆತ್ಮೀಯರ ಶುಭ ಹಾರೈಕೆ, ಬೆಂಬಲ ಮುಂದೆಯೂ ಇರಲಿ, ನಿಮ್ಮ ಸೇವೆಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಲಿದ್ದೇನೆ’ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.