ರಾಮನಗರ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿದ್ದು, ಹೀಗಾಗಿ ಮಾಜಿ ಸಿಎಂ ಕುಮಾರಸ್ವಾಮಿ ಕುಟುಂಬ ದೇವೇಗೌಡರ ಆರೋಗ್ಯ ವೃದ್ಧಿ ಹಾಗೂ ಪಕ್ಷ ಬಲವರ್ಧನೆಗೆ 9 ದಿನಗಳ ಕಾಲ ಶತ ಚಂಡಿಕಾ ಯಾಗ ಹಾಗೂ ಕೋಟಿ ಮೃತ್ಯುಂಜಯ ಜಪ ಮಾಡುತ್ತಿದೆ.
ರಾಮನಗರ ತಾಲೂಕಿನ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಶೃಂಗೇರಿಯ 25 ಪುರೋಹಿತರ ನೇತೃತ್ವದಲ್ಲಿ ಈ ಯಾಗ ನಡೆಯುತ್ತಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಕುಟುಂಬಸ್ಥರು ಭಾಗಿಯಾಗಿದ್ದಾರೆ. ಪೂಜೆಗಾಗಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಕೂಡ ಭಾಗವಹಿಸಿದ್ದಾರೆ.
ದೇವೇಗೌಡರ ಕುಟುಂಬಕ್ಕೆ ಮಾತ್ರ ಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದ್ದು, ಇತರರಿಗೆ ನಿರ್ಬಂಧ ಹೇರಲಾಗಿದೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗೆಲುವಿಗೆ ರಾಜ್ಯಾದ್ಯಂತ ಪಂಚರತ್ನ ಯಾತ್ರೆ ಕೈಗೊಂಡಿದ್ದಾರೆ.
ಮೊಣಕಾಲು ನೋವಿನಿಂದ ಬಳಲುತ್ತಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇ ಗೌಡರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ದೇವೇಗೌಡರ ಆರೋಗ್ಯ ವೃದ್ಧಿಗಾಗಿ ಕುಟುಂಬಸ್ಥರು ವಿಶೇಷ ಪೂಜೆ ನೆರವೇರಿಸಿ ಪ್ರಾರ್ಥನೆ ಮಾಡಿದ್ದಾರೆ.