ಮಂಡ್ಯ: ನಾನು ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ, ಒಂದು ವಾರದ ಒಳಗೆ ಮತ್ತೊಂದು ಸಭೆ ಮಾಡಿ ನಿರ್ಧರಿಸಲಾಗುವುದು ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಪ್ರತಿ ಸಲವೂ ಪಕ್ಷೇತರರಾಗಿ ಸ್ಪರ್ಧೆ ನಿರೀಕ್ಷಿಸುವುದು ಮೂರ್ಖತನವಾಗುತ್ತದೆ. ಕಾಂಗ್ರೆಸ್, ಬಿಜೆಪಿ ಅನ್ನುವುದಕ್ಕಿಂತ ಬೆಂಬಲಿಗರ ಹಿತ ಮುಖ್ಯ. ಪಕ್ಷೇತರರಾಗಿಯೇ ಇದ್ದರೆ ಬೆಂಬಲಿಗರಿಗೆ ಸಹಾಯ ಮಾಡಲಾಗುವುದಿಲ್ಲ. ಪಕ್ಷ ಸೇರ್ಪಡೆಯ ಬಗ್ಗೆ 15 ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆಗೆ ಮಾರ್ಚ್ 12ರಂದು ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಲಿದ್ದು, ಆ ವೇಳೆ ಸಮಾವೇಶದಲ್ಲಿಯೇ ಸುಮಲತಾ ಪಕ್ಷ ಸೇರಲಿದ್ದಾರೆ ಎಂಬ ವದಂತಿ ಹರಿದಾಡಿತ್ತು. ಆದರೆ ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸ್ಪಷ್ಟನೆ ನೀಡಿದ್ದು, ಪ್ರಧಾನಿ ಬಂದಾಗ ಯಾರನ್ನೂ ಪಕ್ಷಕ್ಕೆ ಸೇರ್ಪಡೆ ಮಾಡುವ ಕಾರ್ಯಕ್ರಮ ಇರುವುದಿಲ್ಲ. ಸೂಕ್ತ ಸಮಯದಲ್ಲಿ ನಿಮಗೆ ಎಲ್ಲಾ ವಿಷಯ ತಿಳಿಸಲಾಗುತ್ತದೆ ಎಂದು ಹೇಳಿದ್ದರು.
ಅಂದಹಾಗೆ ಈಗಾಗಲೇ ಬಿಜೆಪಿಯ ಕೆಲವು ನಾಯಕರೊಂದಿಗೆ ಕಾಣಿಸಿಕೊಂಡಿರುವ ಸುಮಲತಾ , ಬಿಜೆಪಿ ಹಿರಿಯ ನಾಯಕ ಎಸ್.ಎಂ.ಕೃಷ್ಣರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆದರೆ, ನಂತರ ಸ್ಪಷ್ಟನೆ ನೀಡಿದ್ದ ಅವರು, ಪದ್ಮವಿಭೂಷಣ ಪ್ರಶಸ್ತಿ ಲಭಿಸಿರುವ ಹಿನ್ನಲೆ ಅಭಿನಂದನೆ ಸಲ್ಲಿಸಲು ತೆರಳಿದ್ದೆ. ಭೇಟಿ ವೇಳೆ ಯಾವುದೇ ರಾಜಕೀಯ ವಿಚಾರದ ಬಗ್ಗೆ ಚರ್ಚಿಸಿಲ್ಲ ಎಂದಿದ್ದಾರೆ.