ಬೆಂಗಳೂರು: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಪ್ಪು ಮಾಡಿದ್ದಾರೆ. ತಪ್ಪು ಮಾಡಿದ್ದಕ್ಕೆ ಶಿಕ್ಷೆ ಆಗುತ್ತದೆ, ಇದರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ತಪ್ಪು ಮಾಡಿದ್ದಕ್ಕೆ ಕಾನೂನು ರೀತಿಯಲ್ಲಿ ಶಿಕ್ಷೆ ಆಗಲಿದೆ ಎಂದು ತಿಳಿಸಿದರು. ಇನ್ನೂ ಸೋಮಣ್ಣ ಪಕ್ಷ ಬಿಡ್ತಾರ ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಕೂಡ ಅವರ ಜೊತೆ ಯಾತ್ರೆಯಲ್ಲಿ ಭಾಗವಹಿಸಿದ್ದೆ. ಅವರು ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಇತರೆ ಸಮಯದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿದ್ದಾರೆ. ಚುನಾವಣೆಯಲ್ಲಿ ಅವರು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಹಾಗಾಗಿ, ಅಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ನಾನು ನಿಂತ ನೀರಲ್ಲ, ಹರಿಯುವ ನೀರು ಎಂದು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅದನ್ನ ಅವರಿಗೆ ಕೇಳಬೇಕು. ಆದರೆ, ಸೋಮಣ್ಣ ನಮ್ಮ ಪಕ್ಷದ ಹಿರಿಯ ನಾಯಕರು, ಅತ್ಯಂತ ಪ್ರಭಾವಿ ನಾಯಕರು, ಅವರು ಪಕ್ಷ ಬಿಡುವುದಿಲ್ಲ ಎಂದು ಹೇಳಿದರು.
ನಾಳೆ ಪ್ರಧಾನಿ ಮೋದಿ ಬೆಂಗಳೂರು ಮೈಸೂರು ದಶಪಥ ರಸ್ತೆ ಲೋಕಾರ್ಪಣೆ ಮಾಡುತ್ತಿದ್ದಾರೆ. ದಶಪಥ ಹೆದ್ದಾರಿ ಬಿಜೆಪಿಯ ಕನಸಿನ ಕೂಸು, ಹೈವೇ ಆಗಬೇಕು ಎನ್ನುವುದು ದಶಕಗಳ ಕನಸು ಎಂದು ತಿಳಿಸಿದರು.