ಬೆಂಗಳೂರು : ರಾಜಕೀಯ ಸ್ವಾತಂತ್ರ್ಯ ಸಫಲವಾಗಬೇಕಾದರೆ ಸಮಾಜದ ತಳಹದಿಯಿಂದ ಸಮಾನತೆ ಜನರಲ್ಲಿ ಬರಬೇಕು. ಸಂವಿಧಾನವೂ ಕೂಡ ಸರ್ಕಾರಗಳು ಆರ್ಥಿಕ ಮತ್ತು ಸಮಾನತೆಯ ಶಕ್ತಿಗಳನ್ನು ಜನರಿಗೆ ನೀಡಬೇಕೆಂಬ ಅಂಶಗಳನ್ನು ತಿಳಿಸುತ್ತದೆ. ನಮ್ಮ ಸಂವಿಧಾನವು ಬಹಳ ಶ್ರೇಷ್ಠವಾಗಿದೆ, ಇದನ್ನು ಜಾರಿ ಮಾಡುವಂಥವರು ಆ ಜಾಗದಲ್ಲಿ ನ್ಯಾಯವಾಗಿದ್ದರೆ ಮಾತ್ರ ಸಾಧ್ಯ ಎಂಬುವುದು ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಗಾಂಧಿ ಭವನದಲ್ಲಿ ನಾಡಿನ ಖ್ಯಾತ ಕವಿ ಹಾಗೂ ಹೋರಾಟಗಾರರಾಗಿದ್ದ ಡಾ. ಸಿದ್ದಲಿಂಗಯ್ಯ ಅವರ ಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದಲಿಂಗಯ್ಯ ಅವರ ಹೋರಾಟದ ಕವಿತೆಗಳು ಇಂದಿನ ವಸ್ತು ಸ್ಥಿತಿಯನ್ನು ಹೇಳುವ ಕವಿತೆಗಳಾಗಿವೆ. ನಮ್ಮ ಸಮಾಜದಲ್ಲಿ ಅಸಮಾನತೆ ಇದೆ ಇದನ್ನು ನೋಡಿ ಜನರನ್ನು ಜಾಗೃತ ಗೊಳಿಸುವ ಕೆಲಸವನ್ನು ಅವರು ಮಾಡಿದ್ದರು ಎಂದು ಸಿದ್ದಲಿಂಗಯ್ಯ ಅವರನ್ನು ಸಿಎಂ ಸ್ಮರಿಸಿದರು.
ಇದನ್ನೂ ಓದಿ : ‘ಸರ್ಕಾರದ ವಿರುದ್ಧ ಧ್ವನಿ ಎತ್ತುವವರನ್ನು ಹತ್ತಿಕ್ಕಲಾಗುತ್ತಿದೆ’
ಬಸವಣ್ಣನವರು ಇವನಾರ, ಇವನಾರವ ಎಂದು 12ನೆ ಶತಮಾನದಲ್ಲಿ ಹೇಳಿದ್ದರು, ಆದರೆ ಇವತ್ತು ಅದೇನಾದರೂ ಸಮಾಜದಲ್ಲಿ ರೂಢಿಯಾಗಿದ್ದರೆ ಇವತ್ತು ವ್ಯವಸ್ಥೆ ಹೀಗೆ ಇರುತ್ತಿರಲಿಲ್ಲ. ಅಂಬೇಡ್ಕರ್ ಹೇಳಿದ್ದರು ನಮಗೆ ರಾಜಕೀಯ ಸ್ವಾತಂತ್ರ್ಯ ಬೇಕೆಂದು, ನಾವು ಜಾಗೃತರಾಗದೆ ಹೋದರೆ ಜಡತ್ವ ಬರುತ್ತದೆ. ನಾವು ಆರ್ಥಿಕವಾಗಿ ಸಾಮಾಜಿಕವಾಗಿ ಸಬಲರಾಗಬೇಕಿದೆ ಎಂದು ಕಿವಿಮಾತು ಹೇಳಿದರು.
ಅವಕಾಶದಿಂದ ವಂಚಿತರಾದ ವ್ಯಕ್ತಿಗಳಿಗೆ ಶಕ್ತಿ ತುಂಬುತ್ತಿದ್ದೇವೆ. ಅಲ್ಲದೆ 1 ಕೋಟಿ 30 ಲಕ್ಷ ಕುಟುಂಬಗಳಿಗೆ 4 ಕೋಟಿ ಗೂ ಹೆಚ್ಚು ಜನರಿಗೆ ತಿಂಗಳಿಗೆ 5 ಸಾವಿರ ಕೊಡುವ ಕೆಲಸ ಮಾಡಿದ್ದೇವೆ. ವಿದ್ಯೆ ಮತ್ತು ಹಣ ಇವೆರಡೂ ಇಲ್ಲದಿದ್ದರೆ ಜೀವನ ಕಷ್ಟವಾಗುತ್ತದೆ ಎಂದರು.


ಕೇವಲ ಅಂಬಾನಿ-ಅದಾನಿ ಅವರ ಜೇಬಿನಲ್ಲಿ ಹಣ ಇದ್ದರೆ ಬಡವರ, ಮಧ್ಯಮ ವರ್ಗದವರ ಉದ್ಧಾರ ಸಾಧ್ಯವಿಲ್ಲ. ತಿಮ್ಮ-ಬೋರ-ಕಾಳನ ಜೇಬಿನಲ್ಲಿ ಹಣ ಇದ್ದರೆ ಮಾತ್ರ ಆರ್ಥಿಕತೆ ಬೆಳವಣಿಗೆ ಆಗುತ್ತದೆ. ದುಡಿಯುವವರ, ಶ್ರಮಿಕರ ಜೇಬಿನಲ್ಲಿ ಹಣ ಇದ್ದರೆ ಅವರು ದೇಶದ ಆರ್ಥಿಕತೆಯ ಬೆಳವಣಿಗೆಗೆ ಕಾರಣರಾಗುತ್ತಾರೆ ಎಂದು ಪ್ರತಿಪಾದಿಸಿದರು.
ಕೇವಲ ಅಂಬಾನಿ, ಅದಾನಿ ಜೇಬು ತುಂಬಿಸುವವರ ಕೈಗೆ ಅಧಿಕಾರ ಕೊಟ್ಟು ಇಡೀ ದೇಶ ಪರಿತಪಿಸುವಂತಾಗಿದೆ. ಈ ಕಾರಣಕ್ಕೆ ನಾವು ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಕಾರ್ಯಕ್ರಮಗಳನ್ನು ಜಾರಿ ಮಾಡಿ ಜನರ ಜೇಬಿಗೆ ಹಣ ಹಾಕುವ ಕೆಲಸಕ್ಕೆ ಮುಂದಾಗಿದ್ದೇವೆ. ಇದರಿಂದ ನಮ್ಮ ಆರ್ಥಿಕತೆ ಚೈತನ್ಯ ಪಡೆದುಕೊಳ್ಳುತ್ತಿದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಜಾತಿ ವ್ಯವಸ್ಥೆಯ ಕಾರಣಕ್ಕೆ ಅಕ್ಷರ ಸಂಸ್ಕೃತಿಯಿಂದ ಕೂಡ ವಂಚಿತ ಮಾಡಲಾಯಿತು. ಅಂಬೇಡ್ಕರ್ ಅವರು ಓದದೇ ಹೋಗಿದ್ದರೆ ನಾವು ಇವತ್ತು ಇನ್ನಷ್ಟು ಹಿಂದುಳಿಯುತ್ತಿದ್ದೀವಿ. ಬದಲಾವಣೆಗೆ ವಿರುದ್ಧವಾದ ಶಕ್ತಿಗಳನ್ನು ತಡೆಯುವ ದೊಡ್ಡ ಶಕ್ತಿಯುತ ಪ್ರಯತ್ನ ಮಾಡೋಣ ಎಂದು ಕರೆ ನೀಡಿದರು.
ಈ ದೇಶದ ಅಧಿಕಾರ ಮತ್ತು ಸಂಪತ್ತು ಕೇವಲ ಬಲಾಢ್ಯರ ಕೈಯಲ್ಲಿ ಇರಬಾರದು, ಅದು ಎಲ್ಲರ ಕೈಗೂ ಹಂಚಿಕೆಯಾಗಬೇಕು ಆಗ ಮಾತ್ರ ಬದಲಾವಣೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಕಾಯಕ ಮತ್ತು ದಾಸೋಹ ಎರಡು ಹಂಚಿಕೆಯಾಗಬೇಕು, ಅದನ್ನೇ ಅಂಬೇಡ್ಕರ್ ಮತ್ತು ಬಸವಣ್ಣ ಹೇಳಿದ್ದರು. ಅಲ್ಲದೆ ಸಿದ್ದಲಿಂಗಯ್ಯನವರು ಇದನ್ನೆ ಪಾಲಿಸುತ್ತಾ, ಗೀತೆ ರಚನೆ ಮಾಡುತ್ತಿದ್ದರು ಎಂದು ಕವಿ ಡಾ.ಸಿದ್ದಲಿಂಗಯ್ಯ ಅವರನ್ನು ನೆನೆದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.