ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಹೆಲಿಕಾಪ್ಟರ್ ಯಾತ್ರೆ ಆರಂಭವಾಗಲಿದೆ. ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪ್ರತ್ಯೇಕವಾಗಿ ಬಸ್ ಯಾತ್ರೆ ನಡೆಸಿ ಪಕ್ಷ ಸಂಘಟನೆ ಮಾಡಲು ಸಜ್ಜಾಗಿದ್ದರು.
ಆದರೆ, ಒಗ್ಗಟ್ಟಾಗಿ ಯಾತ್ರೆ ಮಾಡುವಂತೆ ಹೈಕಮಾಂಡ್ ಸ್ಪಷ್ಟಸೂಚನೆ ನೀಡಿರುವ ಹಿನ್ನಲೆಯಲ್ಲಿ ಬಸ್ ಯಾತ್ರೆಗೂ ಮೊದಲು ಹೆಲಿಕಾಪ್ಟರ್ ಯಾತ್ರೆ ಆರಂಭಿಸಲಿದ್ದಾರೆ. ಜಿಲ್ಲೆಯಿಂದ ಜಿಲ್ಲೆಗೆ ಸಂಚರಿಸಬೇಕಾಗಿರುವುದರಿಂದ ಬಸ್‌ನಲ್ಲಿ ಸಂಚಾರ ಮಾಡಲು ಆಗುವುದಿಲ್ಲ ಎಂಬ ಕಾರಣಕ್ಕೆ ಹೆಲಿಕಾಪ್ಟರ್ ಮೂಲಕ ಸಂಚರಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ಹೈಕಮಾಂಡ್ ಕೂಡ ಒಪ್ಪಿಗ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರು ಜೊತೆಗೂಡಿ ಜ. 9 ರಿಂದ 25 ರವರೆಗೂ ಹೆಲಿಕಾಪ್ಟರ್ ಮೂಲಕ 20 ಜಿಲ್ಲೆಯ ಜಿಲ್ಲಾ ಕೇಂದ್ರಗಳಿಗೆ ತೆರಳಿ 150 ವಿಧಾನಸಭಾ ಕ್ಷೇತ್ರಗಳ ಸಮಾವೇಶ ನಡೆಸಲು ತೀರ್ಮಾನಿಸಿದ್ದಾರೆ. ನಿತ್ಯ ಎರಡು ಜಿಲ್ಲೆಯಂತೆ 15 ದಿನಗಳಲ್ಲಿ 20 ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ.