ಬೆಳಗಾವಿ: ಸಿದ್ದರಾಮಯ್ಯನವರಿಗೆ ಕ್ಷೇತ್ರ ಸಿಗುತ್ತಿಲ್ಲ. ಅವರು ಮುಖ್ಯಮಂತ್ರಿ ಆಗಲು ಹೇಗೆ ಸಾಧ್ಯ? ಕಳೆದ ಬಾರಿ ಸಿಎಂ ಇದ್ದವರು ಅಲೆಮಾರಿ ರೀತಿಯಲ್ಲಿ ಅಲೆದು ಕೊನೆಗೆ ಒಂದು ಗಿಡದ ಟೊಂಗೆಗೆ ಸಿಕ್ಕ ಹಾಗೆ ಬಾದಾಮಿಗೆ ಹೋಗಿ ಸಿಕ್ಕಿಹಾಕಿಕೊಂಡರು ಎಂದು ಶಾಸಕ ಅಭಯ್ ಪಾಟೀಲ್ ವ್ಯಂಗ್ಯವಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಈ ಬಾರಿ ಎಲ್ಲಿ ನಿಲ್ಲಬೇಕು ಎನ್ನುವ ಗೊಂದಲ ಅವರಲ್ಲಿದೆ. ಕೋಲಾರದಲ್ಲಿ ಮುನಿಯಪ್ಪ ಸಾಹೇಬರು ಅವರನ್ನು ಎಷ್ಟು ಚೆನ್ನಾಗಿ ಸ್ವಾಗತ ಮಾಡುತ್ತಿದ್ದಾರೆ ನೋಡಿ. ಈ ಬಾರಿ ನೂರಕ್ಕೆ ನೂರು ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ, ಸಿದ್ದರಾಮಯ್ಯ ಅವರಿಗೆ ಕ್ಷೇತ್ರವೇ ಸಿಗುತ್ತಿಲ್ಲ. ಹೀಗಿದ್ದಾಗ ಮುಖ್ಯಮಂತ್ರಿ ಆಗೋಕೆ ಹೇಗೆ ಸಾಧ್ಯ? ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ಬಳಿಕ ನಮ್ಮಲ್ಲಿ ಯಾರು ಕೂಡಾ ಮುಖ್ಯಮಂತ್ರಿ ಆಗುತ್ತೇವೆ ಎಂದು ಹೇಳಿಲ್ಲ. ಹೀಗಾಗಿ ನಮ್ಮಲ್ಲಿ ನೂರು ಬಾಗಿಲು ಇರಲು ಸಾಧ್ಯವಿಲ್ಲ. ಕಾಂಗ್ರೆಸ್‌ನಲ್ಲಿ ಮಾತ್ರ 5 ಬಾಗಿಲುಗಳಿವೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಜಿ. ಪರಮೇಶ್ವರ್, ಎಂಬಿ ಪಾಟೀಲ್ ಹಾಗೂ ಖರ್ಗೆ ಸೇರಿ 5 ಬಾಗಿಲು ಆಗಿದೆ.
ಯಾವ ಬಾಗಿಲಿನಿಂದ ಕಾಂಗ್ರೆಸ್ ಒಳಗೆ ಹೋಗಬೇಕು ಎಂದು ಟೀಕಿಸಿದರು. ಈ ನಾಲ್ವರು ಸಿಎಂ ಆಗಬೇಕು ಎಂದು ಕಾದು ಕುಳಿತಿದ್ದಾರೆ. ಆದರೆ ಹೈಕಮಾಂಡ್ ಖರ್ಗೆ ಅವರನ್ನು ಸಿಎಂ ಮಾಡಬೇಕು ಎಂದು ನಿರ್ಣಯ ಮಾಡಿದೆ. ಇದಕ್ಕಾಗಿ ಹೈಕಮಾಂಡ್ ಎಲ್ಲರನ್ನೂ ಬಿಟ್ಟು ಬೇರೆಯೇ ದಾರಿ ಹಿಡಿದಿದೆ. ಅಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ತಾಳವಿಲ್ಲ ಮೇಳವಿಲ್ಲ ಎಂದರು.