ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಯಾದಗಿರಿ, ಕಲಬುರಗಿ ಜಿಲ್ಲೆಗಳಿಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಈ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯ ‘ನ್ಯಾಯಬೇಕು ಮೋದಿ’ ಎಂಬ ಪೋಸ್ಟರ್ ರಿಲೀಸ್ ಮಾಡಿದ್ದಾರೆ.
#ನ್ಯಾಯಬೇಕು_ಮೋದಿ ಎಂಬ ಹ್ಯಾಶ್ ಟ್ಯಾಗ್ನಡಿ ಅಭಿಯಾನ ಶುರುಮಾಡಿದ್ದು, ಪ್ರಧಾನಿಯವರ ರಾಜ್ಯ ಪ್ರವಾಸ ಹಿನ್ನೆಲೆ ಪಿಎಂ ಮೋದಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ‘ನ್ಯಾಯಬೇಕು ಮೋದಿ’ ಎಂಬ ಪೋಸ್ಟರ್ ರಿಲೀಸ್ ಮಾಡಿ ಮೋದಿಯವರಿಗೆ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.
ಕೊರೊನಾ ಕಾಲದಲ್ಲಿ ಸ್ಯಾನಿಟೈಸರ್, ಮಾಸ್ಕ್ ನಿಂದ ವೆಂಟೀಲೇಟರ್ವರೆಗೆ ಎಲ್ಲದರಲ್ಲೂ ರಾಜ್ಯ ಸರ್ಕಾರ ಲೂಟಿ ಮಾಡಿದ್ದರಿಂದ 3 ಸಾವಿರ ಕೋಟಿ ಅವ್ಯವಹಾರ ನಡೆದಿದೆ, ಕೊರೋನಾ ಹಾದಿ ಬೀದಿಯಲ್ಲಿ ಸತ್ತವರ ಆತ್ಮಗಳು ನ್ಯಾಯಕ್ಕಾಗಿ ನಿಮ್ಮ ಹಾದಿಯನ್ನೇ ಕಾಯುತ್ತಿವೆ, ಮೋದಿಯವರೇ ನಮಗೆ ನ್ಯಾಯ ಬೇಕು ಎಂದು ಸರಣಿ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಬದುಕಿದ್ದಾಗಲಂತೂ ನ್ಯಾಯ ಸಿಗ್ಲಿಲ್ಲ. ಸತ್ತ ಮೇಲಾದರೂ ನ್ಯಾಯ ಸಿಗುವುದು ಬೇಡವೇ ಮೋದಿಯವರೇ? ಮೆಟ್ರೋ ಪಿಲ್ಲರ್ನ ಚೌಕಟ್ಟು ಬಿದ್ದು ತಾಯಿ, ಮಗು ಮೃತಪಟ್ಟಿದ್ದಾರೆ. ಚೀಫ್ ಇಂಜಿನಿಯರ್ ಮೇಲೆ ಕ್ರಮ ಯಾವಾಗ ಮೋದಿಯವರೇ? ಕಮಿಷನ್ ನೀಡಿಲ್ಲ ಎಂಬ ಕಾರಣಕ್ಕೆ ಗುತ್ತಿಗೆದಾರ ಪ್ರಸಾದ್ ಮೃತಪಟ್ಟ. ಈ ಸಾವಿನ ಸರಣಿ ಕೊನೆಗಾಣಿಸುವವರು ಯಾರು ಮೋದಿಯವರೇ? ಎಂದು ಸಿದ್ದರಾಮಯ್ಯ ಕೇಳಿದ್ದಾರೆ.