ಬೆಂಗಳೂರು: ಕೋಲಾರ ವಿಧಾನಸಭಾ ಕ್ಷೇತ್ರವನ್ನು ಕೈ ಬಿಟ್ಟು ವರುಣಾದಿಂದ ಸ್ಪರ್ಧೆ ಮಾಡಿ ಎಂದು ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಕೋಲಾರದಲ್ಲಿ ನಾಳೆ ನಿಗದಿಯಾಗಿದ್ದ ಸಿದ್ದರಾಮಯ್ಯರ ಪ್ರವಾಸ ರದ್ದುಗೊಂಡಿದೆ. ಕೋಲಾರದಲ್ಲಿ ಸಿದ್ದರಾಮಯ್ಯ ಗೆಲುವು ಕಷ್ಟ ಎಂದು ಮಾಹಿತಿ ಪಡೆದಿರುವ ರಾಹುಲ್ ಸಿದ್ದರಾಮಯ್ಯಗೆ ಈ ಸಲಹೆ ನೀಡಿದ್ದಾರಂತೆ, ಸಲಹೆ ಸ್ವೀಕರಿಸಿರುವ ಸಿದ್ದರಾಮಯ್ಯ ಕೂಡಾ ಹೈಕಾಂಡ್ ತೀರ್ಮಾನಕ್ಕೆ ನಾನು ಬದ್ಧ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಇದು ಸಿದ್ದರಾಮಯ್ಯರ ಕೊನೆಯ ಚುನಾವಣೆಯಾಗಿದ್ದು, ಗೆಲ್ಲಲೇ ಬೇಕಾದ ಒತ್ತಡದಲ್ಲಿದ್ದಾರೆ, ಅದ್ದರಿಂದ ಸಿದ್ದರಾಮಯ್ಯ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ ಎನ್ನಲಾದ ಚರ್ಚೆ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಇನ್ನು ನಿನ್ನೆ ಕಾಂಗ್ರೆಸ್‌ನ ಉನ್ನತಮಟ್ಟದಲ್ಲಿ ನಡೆದ ಸಭೆಯಲ್ಲಿ 125 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಕುರಿತು ಅಂತಿಮ ತೀರ್ಮಾನವನ್ನ ತೆಗೆದುಕೊಳ್ಳಲಾಗಿದೆ ಹಾಗೂ 71 ಮಂದಿ ಹಾಲಿ ಶಾಸಕರಿಗೆ ಮತ್ತೆ ಕೈ ಟಿಕೆಟ್ ನೀಡಲು ಸಭೆಯಲ್ಲಿ ನಿರ್ಧಾರಮಾಡಲಾಗಿದೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದ್ದರು. ಯುಗಾದಿ ಹಬ್ಬದ ನಂತರ ಈ ತಿಂಗಳ 22 ಕ್ಕೆ ಮೊದಲ ಪಟ್ಟಿ ಬಿಡುಗಡೆ ಮಾಡಲು ಕಾಂಗ್ರೆಸ್ ನಾಯಕರು ರಾಜ್ಯ ಘಟಕದ ನಾಯಕರ ಸಲಹೆ ಮೇರೆಗೆ ನಿರ್ಧಾರ ಕೈಗೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಈ ನಡುವೆ ಹಾಲಿ ವರುಣಾ ಕ್ಷೇತ್ರದ ಶಾಸಕರಾದ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ತಂದೆಯವರಿಗಾಗಿ ಕ್ಷೇತ್ರ ತ್ಯಾಗಮಾಡಲು ಈ ಮೊದಲೆ ಸಿದ್ದರಾಗಿದ್ದರು , ಆದರೆ ಸಿದ್ದರಾಮಯ್ಯ ಅವರು ಈಗ ಮಗನ ಸಲಹೆ ಮತ್ತು ಹೈಕಾಮಾಂಡ್ ಸಲಹೆ ಸ್ವೀಕರಿಸಿ ತಮ್ಮ ಕೊನೆಯ ಚುನಾವಣೆಯನ್ನು ತಮ್ಮ ತವರು ಕ್ಷೇತ್ರದಲ್ಲೇ ಎದುರಿಸಲು ಸಿದ್ದರಾಗಿದ್ದಾರೆ ,ಸಿದ್ದರಾಮಯ್ಯ ಅವರ ಹುಟ್ಟೂರಾದ ಸಿದ್ರಾಮಹುಂಡಿ ಗ್ರಾಮ ಕೊಡ ವರುಣ ಕ್ರೇತ್ರದಲ್ಲೆ ಬರುವುದರಿಂದ ಸಿದ್ದರಾಮಯ್ಯ ಅವರ ಈ ಕೊನೆಯ ಚುನಾವಣೆ ಸ್ವಂತ ಕ್ಷೇತ್ರದಲ್ಲೆ ಸ್ಪರ್ಧೆ ಮಾಡುವ ಮೂಲಕ ಕೊನೆಗೊಳ್ಳಲಿದೆ ಎನ್ನಬಹುದು . ಈ ನಡುವೆ ಸಿದ್ದರಾಮಯ್ಯ ಅವರ ಈ ಕ್ಷೇತ್ರ ಬದಲಾವಣೆ ನಡೆಯನ್ನ ಟೀಕಿಸಿರುವ ಮಾಜಿ ಶಾಸಕ ವರ್ತೂರು ಪ್ರಕಾಶ್, ಸಿದ್ದರಾಮಯ್ಯ ಅವರು ಸೋಲಿನ ಭೀತಿಯಿಂದ ಕೋಲಾರ ಬಿಟ್ಟು ವರುಣಾ ಕ್ಷೇತ್ರದ ಕಡೆ ಪಲಾಯನ ಮಾಡಿದ್ದಾರೆ, ನನ್ನ ಎದುರು ಸೋಲು ಅನುಭವಿಸುವ ರಾಜಕಾರಣಿಯಾಗುವ ಭಯ ಅವರನ್ನು ಕಾಡಿದೆ ಅದ್ದರಿಂದ ಈ ಪಲಾಯನದ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಟೀಕಿಸಿದ್ದಾರೆ.
ಆದರೆ ವರುಣ ಕ್ರೇತ್ರದಿಂದ ಸಿದ್ದರಾಮಯ್ಯ ಅವರ ಸ್ಪರ್ಧೆ ಖಚಿತ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತಿದ್ದರೂ ಸಿದ್ದರಾಮಯ್ಯ ಮಾತ್ರ ತಮ್ಮ ಕ್ರೇತ್ರದ ಗುಟ್ಟನ್ನ ಬಿಟ್ಟುಕೊಡ್ತಿಲ್ಲ ,ಸದ್ಯ ಸಿದ್ದರಾಮಯ್ಯರ ಕ್ಷೇತ್ರ ಆಯ್ಕೆ ಗೊಂದಲದ ಗೂಡಾಗಿದ್ದು ಯಾವ ಕ್ಷೇತ್ರದಿಂದ ಅಖಾಡಕ್ಕಿಳೀತಾರೆ ಅನ್ನೊದು ಇನ್ನಷ್ಟು ಕುತೂಹಲ ಕೆರಳಿಸಿದೆ.