ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡ್ತಿದ್ದಾರಾ ? ಅನ್ನೋ ಗುಸು ಗುಸು ಶುರುವಾಗಿದೆ. ಮುನಿಯಪ್ಪ ಅಂಡ್ ಟೀಂ ಜೊತೆ ಸಿದ್ದರಾಮಯ್ಯ ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತುಕತೆ ನಡೆಸಿದ್ದು,ಮಾತುಕತೆ ಬಳಿಕ ಕೆ.ಹೆಚ್ ಮುನಿಯಪ್ಪ ಟೀಂ ಕೋಲಾರಕ್ಕೆ ಸ್ವಾಗತ ಕೋರಿದೆ.
ಜನವರಿ 9 ರಂದು ಸಿದ್ದರಾಮಯ್ಯ ಅವರು ಕೋಲಾರ ಪ್ರವಾಸ ಕೈಗೊಂಡಿದ್ದು, ಅಂದೇ ಕೋಲಾರದಲ್ಲಿ ಸ್ಪರ್ಧೆ ಬಗ್ಗೆ ಘೋಷಣೆ ಸಾಧ್ಯತೆ ಇದೆ. ಈ ಮೂಲಕ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಅನ್ನೋದು ಗೊತ್ತಾಗಲಿದೆ.
ನನಗೆ ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಒತ್ತಾಯ ಮಾಡುತ್ತಿದ್ದಾರೆ. ಎರಡು ದಿನ ಬಂದರೆ ಸಾಕು ನಾವೆಲ್ಲಾ ಸೇರಿ ಒಟ್ಟಾಗಿ ಗೆಲ್ಲಿಸುವ ಭರವಸೆ ನೀಡಿದ್ದಾರೆ.
ನನಗೆ ಯಾವ ಕ್ಷೇತ್ರದಲ್ಲಿಯೂ ಸ್ಪರ್ಧೆ ಮಾಡಲು ಅಂಜಿಕೆ ಇಲ್ಲ. ಬಾದಾಮಿ ಕ್ಷೇತ್ರದಲ್ಲಿ ಸ್ವರ್ಧೆಗೂ ಒತ್ತಾಯವಿದೆ. ಬಾದಾಮಿ ದೂರವಿದೆ ನನಗೆ ಓಡಾಡಲು ಕಷ್ಟವಾಗುತ್ತಿದೆ ಎಂದು ಗರುಡನಹಳ್ಳಿಯಲ್ಲಿ ಸಿದ್ದರಾಮಯ್ಯ ಹೇಳಿದ್ದರು.ಈಗಾಗಲೇ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸುವ ವಿಚಾರವಾಗಿ ಎರಡು ಖಾಸಗಿ ಏಜೆನ್ಸಿಗಳಿಂದ ಸಮೀಕ್ಷೆ ನಡೆಸಿದ್ದು, ಒಂದರಿಂದ ಶೇ.56, ಮತ್ತೊಂದರಿಂದ ಶೇ.60ರಷ್ಟು ಪ್ರಮಾಣ ಸಿಕ್ಕಿದೆ. ಹೀಗಿರುವಾಗ ಕೋಲಾರ ಕ್ಷೇತ್ರವು ಅವರಿಗೆ ಸೇಫ್ ಎಂಬಂತಾಗಿದೆ ಅಂತಾ ಚರ್ಚೆಗಳ ನಡೆಯುತ್ತಿವೆ.
ಸಿದ್ದರಾಮಯ್ಯ ಕೋಲಾರ ಕ್ಷೇತ್ರಕ್ಕೆ ಬರುವುದರಿಂದ ಸ್ವತಃ ಸಿದ್ದರಾಮಯ್ಯ ಅವರಿಗಿಂತಲೂ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿನ ಕಾಂಗ್ರೆಸ್ ಶಾಸಕರಿಗೆ ಹೆಚ್ಚು ಅನುಕೂಲವಾಗಲಿದ್ದು, ಮೂರು ಜಿಲ್ಲೆಗಳಲ್ಲಿಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಪಡೆಯಲು ಅನುಕೂಲವಾಗುತ್ತದೆ ಎಂಬುದು ಕಾಂಗ್ರೆಸ್ ನಾಯಕರ ವಾದಲವಾಗಿದೆ. ಇದೇ ಕಾರಣದಿಂದ ಶತಾಯಗತಾಯ ಸಿದ್ದರಾಮಯ್ಯರನ್ನು ಕೋಲಾರದಿಂದ ಸ್ಪರ್ಧೆ ಮಾಡುವಂತೆ ಒತ್ತಡ ಹೇರಲಾಗುತ್ತಿದೆ ಅಂತಾ ಹೇಳಲಾಗ್ತಿದೆ.