ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿ ನಡೆಯುತ್ತಿದ್ದ ಫೈಟ್ ಅಂತ್ಯವಾಗಿದ್ದು ಸಿದ್ದರಾಮಯ್ಯ ಮತ್ತೊಮ್ಮೆ ಕರ್ನಾಟಕದ ಮುಖ್ಯಮಂತ್ರಿಯಾಗಲಿದ್ದಾರೆ , ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
“ಮುಂದಿನ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಇಂದು/ ನಾಳೆ ನಿರ್ಧಾರ ಪ್ರಕಟಿಸಲಾಗುವುದು. ಮುಂದಿನ 72 ಗಂಟೆಯೊಳಗೆ ಹೊಸ ಸಚಿವ ಸಂಪುಟ ಅಸ್ತಿತ್ವಕ್ಕೆ ಬರಲಿದೆ” ಎಂದು ಸುರ್ಜೆವಾಲಾ ಹೇಳಿದ್ದರು. ಇನ್ನೂ ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆಯಾಗಲಿದ್ದಾರೆ ಎಂದು ಬೆಂಬಲಿಗರು, ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದರೆ ಡಿಕೆಶಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಅವರು ಅಪೇಕ್ಷಿಸುವ ಎರಡು ಪ್ರಮುಖ ಖಾತೆಗಳನ್ನು ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ಪಕ್ಷದ ಬಹುತೇಕ ಶಾಸಕರ ಬೆಂಬಲವನ್ನು ಸಿದ್ದರಾಮಯ್ಯ ಹೊಂದಿದ್ದು, ಮುಂದಿನ ಐದು ವರ್ಷಗಳ ಕಾಲ ಸ್ಥಿರ ಸರ್ಕಾರವನ್ನು ನೀಡಲು ಮತ್ತು ಪಕ್ಷ ನೀಡಿದ ಭರವಸೆಗಳನ್ನು ಜಾರಿಗೆ ತರಲು ಸಿದ್ದರಾಮಯ್ಯ ಅವರ ಕೈಬಲಪಡಿಸಬೇಕು ಎಂಬ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗ್ತಿದೆ.
ಮೊದಲ ಅವಧಿಗೆ ಸಿದ್ದರಾಮಯ್ಯ ಸಿಎಂ ಆಗಲಿದ್ದರೆ ಎರಡನೇ ಅವಧಿಗೆ ಡಿ.ಕೆ ಶಿವಕುಮಾರ್ ಸಿಎಂ ಪಟ್ಟ ಅಲಂಕರಿಸಲಿದ್ದಾರೆ. ಡಿಕೆ ಶಿವಕುಮಾರ್ ಡಿಸಿಎಂ, ಎರಡು ಪ್ರಬಲ ಖಾತೆಯನ್ನು ನೀಡುವುದಾಗಿ ಹೈಕಮಾಂಡ್ ಭರವಸೆ ನೀಡಿದೆ. ಅಷ್ಟೇ ಅಲ್ಲದೇ ಲೋಕಸಭಾ ಚುನಾವಣೆ ಮುಗಿಯುವರೆಗೂ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ .