ಬೆಂಗಳೂರು: ಮಹಾನಗರದಲ್ಲಿ ನಿರಂತರವಾಗಿ ನಡೆಯುತ್ತಿರುವ ಸಾಮೂಹಿಕ ಅತ್ಯಾಚಾರಗಳು ರಾಜ್ಯದ ಕಾನೂನು ಸುವ್ಯವಸ್ಥೆ ಜೀವಂತವಾಗಿದೆಯೇ ಎಂಬ ಅನುಮಾನ ಮೂಡಿಸುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಆತಂಕ ವ್ಯಕ್ತಪಡಿಸಿ ಸರಣಿ ಟ್ವೀಟ್ ಮಾಡಿದ್ದಾರೆ.
ಸ್ನೇಹಿತರೊಂದಿಗೆ ಪಾರ್ಕ್ ನಲ್ಲಿ ಕುಳಿತಿದ್ದ ಯುವತಿಯನ್ನು ಬಲವಂತವಾಗಿ ನಾಲ್ವರು ಕಾರಿನಲ್ಲಿ ಕರೆದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿ ಟ್ಟೀಟ್ ಮಾಡಿದ್ದಾರೆ.
ಸಾಮರ್ಥ್ಯ, ನೈತಿಕತೆ ಈ ಯಾವುದೂ ಇಲ್ಲದೆ ಕುರ್ಚಿಗೆ ಅಂಟಿಕೊಂಡು ಕೂತಿರುವ ಆರಗ ಜ್ಞಾನೇಂದ್ರ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತೇನೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಅದಕ್ಷತೆಯಿಂದಾಗಿ ರಾಜ್ಯದ ಪೊಲೀಸ್ ಇಲಾಖೆ ಸಂಪೂರ್ಣವಾಗಿ ಹಾದಿ ತಪ್ಪಿದೆ. ಚುನಾವಣಾ ಕಾಲದಲ್ಲಿ ಈ ರೀತಿಯ ಪೊಲೀಸ್ ನಿಷ್ಕ್ರಿಯತೆ ಅಪಾಯಕಾರಿಯಾದುದು. ಆದ್ದರಿಂದ ಚುನಾವಣಾ ಆಯೋಗ ಪೊಲೀಸ್ ಇಲಾಖೆಯ ಕಾರ್ಯನಿರ್ವಹಣೆಯ ಮೇಲೆ ನಿಗಾ ಇಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಒತ್ತಾಯಿಸಿದ್ದಾರೆ.