ವಿಧಾನಸಭೆ: ಹೊಡಿ, ಬಡಿ ಅಂತಾ ಯಾವ ಧರ್ಮವೂ ಹೇಳಿಕೊಡಲ್ಲ. ಇಂತಹ ಹೇಳಿಕೆಗಳಿಗೆಲ್ಲ ನಾನು ಬಗ್ಗುವವನಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ನೀಡಿದ್ದ ವಿವಾದಾತ್ಮಕ ಹೇಳಿಕೆ ಬಗ್ಗೆ ಸದನದಲ್ಲಿ ಸಿದ್ದರಾಮಯ್ಯ ಪ್ರಸ್ತಾಪಿಸಿದರು. ಆರಗ ಜ್ಞಾನೇಂದ್ರ ಅವರೇ ನಿಮ್ಮ ಇಲಾಖೆ ಸತ್ತು ಹೋಗಿದೆ. ನೀವು ಇಲಾಖೆ ಮುನ್ನಡೆಸಲು ಅಸಮರ್ಥರು ಎಂದರು ಗುಡುಗಿದರು.
ತಾನು ಗೃಹ ಇಲಾಖೆ ಮುನ್ನಡೆಸಲು ಸಮರ್ಥ ಎಂದು ಹೇಳಿದ ಆರಗ ಜ್ಞಾನೇಂದ್ರ ಅವರಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಸಮರ್ಥರಾಗಿದ್ದರೆ ಅಶ್ವತ್ಥ್ ನಾರಾಯಣ ವಿರುದ್ಧ ಪ್ರಕರಣ ದಾಖಲಿಸಿ ಎಂದರು. ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ಮುಂದುವರಿಸಿ, ಧಮ್ ಇದ್ದರೆ, ತಾಕತ್ತಿದ್ದರೆ ನನ್ನನ್ನು ಹೊಡೆದು ಹಾಕಿ ನೋಡೋಣ. ನಾನು ಎದುರಿಸಲು ಸಿದ್ಧನಿದ್ದೇನೆ ಎಂದರು.
ಟಿಪ್ಪುನನ್ನು ಹೊಡೆದು ಹಾಕಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನೂ ಹೊಡೆದು ಹಾಕೋಣ ಎಂದು ಸಚಿವ ಅಶ್ವತ್ಥ ನಾರಾಯಣ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಮಂಡ್ಯದಲ್ಲಿ ಶಕ್ತಿಕೇಂದ್ರ ಸಭೆಯಲ್ಲಿ ಸಾಂದರ್ಭಿಕವಾಗಿ ಮಾತಾಡಿದ್ದೇನೆಯೇ ಹೊರತು ವೈಯಕ್ತಿಕವಾಗಿ ಅಲ್ಲ ಎಂದು ಸಚಿವ ಅಶ್ವತ್ಥ್ ನಾರಾಯಣ್ ಸ್ಪಷ್ಟನೆ ಕೊಟ್ಟಿದ್ದರು.