ಬಾಗಲಕೋಟೆ: ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ, ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ನೇಕಾರರಿಗೆ 10 ಹೆಚ್‌ಪಿವರೆಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿ, ನೇಕಾರರಿಗೆ 10 ಹೆಚ್‌ಪಿವರೆಗೆ ಉಚಿತ ವಿದ್ಯುತ್ ಘೋಷಣೆ ಮಾಡುವ ಮೂಲಕ ನೇಕಾರರ ಗಮನಸೆಳೆಯುತ್ತಿದ್ದು, ಈಗಾಗಲೇ ಕಾಂಗ್ರೆಸ್ ನಾಯಕರು ಹಲವು ಉಚಿತ ಘೋಷಣೆಗಳನ್ನು ಮಾಡಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೂ 200 ಯುನಿಟ್ ವಿದ್ಯುತ್ ನೀಡುವುದಾಗಿ ಡಿ.ಕೆ.ಶಿವಕುಮಾರ್ ಘೋಷಣೆ ಮಾಡಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನವೇ 10 ಕೆಜಿ ಅಕ್ಕಿ ಕೊಡಲು ಆದೇಶಿಸುತ್ತೇವೆ ಎಂದು ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದರು. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಕುಟುಂಬ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಪ್ರತಿ ಮಹಿಳೆಗೆ ಮಾಸಿಕ 2,000 ಧನಸಹಾಯ ನೀಡ್ತೇವೆ ಎಂದು ಘೋಷಿಸಿದ್ದರು.
ಕಾಂಗ್ರೆಸ್ ನವರಿಗೆ ಧಮ್ ಇದ್ದರೆ, ತಾಕತ್ ಇದ್ದರೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಾರೆ. ಮಿಸ್ಟರ್ ಬೊಮ್ಮಾಯಿ ಅವರೇ, ನಿಮಗೆ ಧಮ್ ಇದ್ರೆ ತಾಕತ್ ಇದ್ರೆ ಬನ್ನಿ ಅಭಿವೃದ್ಧಿ ಕೆಲಸದ ಬಗ್ಗೆ ಚರ್ಚೆ ಮಾಡೋಣ. ಹೀಗೆಂದರೆ ಅವರು ಬರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.