ಬೆಂಗಳೂರು: ನಮ್ಮ ಸರ್ಕಾರ ಇದ್ದಾಗ ಲೋಕಾಯುಕ್ತವನ್ನು ಬಂದ್ ಮಾಡಿಲ್ಲ, ನಾನು ಲೋಕಾಯುಕ್ತ ಬಂದ್ ಮಾಡಿದ್ದರೇ ಇವತ್ತೇ ರಾಜೀನಾಮೆ ಕೊಡುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಭ್ರಷ್ಟಾಚಾರ ನಿಗ್ರಹಕ್ಕಾಗಿ ಎಸಿಬಿ ರಚನೆ ಮಾಡಿದ್ದೇ ಅಷ್ಟೇ. ಲೋಕಾಯುಕ್ತದ ಯಾವ ಅಧಿಕಾರವನ್ನು ಕಿತ್ತುಕೊಂಡಿಲ್ಲ. ನಮ್ಮ ಕಾಲದಲ್ಲೂ ಲೋಕಾಯುಕ್ತರು ಇದ್ದರು. ಎಲ್ಲಾ ಸತ್ಯ ಗೊತ್ತಿದ್ದರೂ ಬೊಮ್ಮಾಯಿ ಸುಳ್ಳು ಹೇಳುತ್ತಿದ್ದಾರೆ. ಎಸಿಬಿ ರದ್ದು ಮಾಡುತ್ತೇವೆ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿತ್ತು. ಆದರೆ, ಎಸಿಬಿ ರದ್ದು ಮಾಡಿದ್ದು ಬಿಜೆಪಿ ಸರ್ಕಾರವಲ್ಲ. ನ್ಯಾಯಾಲಯ ರದ್ದು ಮಾಡಿದೆ ಎಂದು ಸ್ಪಷ್ಟಪಡಿಸಿದರು.
ಇನ್ನೂ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ರಾಜ್ಯ ಸರ್ಕಾರ ರಕ್ಷಣೆ ಮಾಡುತ್ತಿದ್ದು, ವಿರೂಪಾಕ್ಷಪ್ಪ ಅವರು ಮನೆಯಲ್ಲಿದ್ರೂ ಪೊಲೀಸರು ಬಂಧಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು. ವಿರೂಪಾಕ್ಷಪ್ಪ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಲು ಬಂದಾಗ ಆಗ ಯಾಕೆ ಬಂಧಿಸಲಿಲ್ಲ? ಬಿಜೆಪಿಯವರಿಗೆ ಸುಳ್ಳು ಹೇಳುವುದು ಚಟ ಆಗಿದೆ. ಲೋಕಾಯುಕ್ತ ವಿಚಾರದಲ್ಲಿ ಬಿಜೆಪಿಯವರು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ತಿಳಿಸಿದರು.