ಮೈಸೂರು : ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡರೂ ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಸೋಲು ಖಚಿತ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಲಿಂಗದೇವರಕೊಪ್ಪಲು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮುಂದಿನ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರೋದಿಲ್ಲ , ಅವರು ಯಾವಾಗಲೂ ಗೆದ್ದೆತ್ತಿನ ಬಾಲ ಹಿಡಿಯುವ ಕೆಲಸ ಮಾಡುತ್ತಾರೆ ಎಂದು ಟೀಕಿಸಿದರು. 2018ರಲ್ಲಿ ಅದು 37 ಸ್ಥಾನ ಗೆದ್ದಿತ್ತು. ಆದರೆ, ಈ ಬಾರಿ 20 ಸ್ಥಾನ ಗೆದ್ದರೆ ಅದೇ ಜಾಸ್ತಿ. ಕುಮಾರಸ್ವಾಮಿ ಹೇಳುವಂತೆ 120 ಸ್ಥಾನ ಬರುವುದು ಅಸಾಧ್ಯ. ಗೆದ್ದೆತ್ತಿನ ಬಾಲ ಹಿಡಿದು ತಮ್ಮ ಬೇಳೆಕಾಳು ಬೇಯಿಸಿಕೊಳ್ಳಲು ಮುಂದಾಗುತ್ತಾರೆ ಎಂದರು.
ಬಿಜೆಪಿ ದುರಾಡಳಿತದಿಂದ ಬೇಸತ್ತ ಜನತೆ ಕಾಂಗ್ರೆಸ್ ನೀಡಿದ ಯೋಜನೆಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ನೈಜತೆಯ ಅರಿವಾಗಿರುವ ಅವರು ಈ ಬಾರಿ ಬಿಜೆಪಿ, ಜೆಡಿಎಸ್ ಸೋಲಿಸಲು ತೀರ್ಮಾನಿಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾನು 1999ರಲ್ಲಿ ಜೆಡಿಎಸ್‌ನ ಪ್ರಥಮ ರಾಜ್ಯಾಧ್ಯಕ್ಷನಾಗಿದ್ದೆ. ಆ ಸಂದರ್ಭದಲ್ಲಿಯೇ 59 ಸ್ಥಾನ ಗೆದ್ದಿದ್ದೆವು. ಕಳೆದ ಬಾರಿ 37 ಸ್ಥಾನ ಜೆಡಿಎಸ್ ಪಡೆದಿದೆ. ಏಳೆಂಟು ಜಿಲ್ಲೆಗಳಲ್ಲಿ ಮಾತ್ರ ಜೆಡಿಎಸ್ ಪ್ರಭಾವ ಇದೆ ಎಂದರು.