ಬೆಂಗಳೂರು: ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರಿಗೆ ಕೈ ನೋವು ಕಾಣಿಸಿಕೊಂಡಿದೆ. ನಿರಂತರ ಪ್ರಚಾರ, ಜನರ ನಡುವೆ ಓಡಾಟ ನಡೆಸಿದ ಹಿನ್ನೆಲೆ ಎಡಗೈಯಲ್ಲಿ ಊತ ಕಾಣಿಸಿಕೊಂಡಿದೆ.
ವಿಶ್ರಾಂತಿ ಸಿಗದ ಹಿನ್ನೆಲೆ ಸಿದ್ದರಾಮಯ್ಯ ಬಳಲಿದ್ದಾರೆ. ಆಪ್ತ ವೈದ್ಯ ರವಿಕುಮಾರ್ ಸಿದ್ದು ಮನೆಯಲ್ಲೇ ಚಿಕಿತ್ಸೆ ನೀಡಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯನವರ ಕೈ ಊತ ಈಗ ಕೊಂಚ ಕಡಿಮೆಯಾಗಿದ್ದು, ಪೂರ್ಣ ಊತ ಕಡಿಮೆಯಾಗಲು ಕೆಲವು ದಿನಗಳು ಬೇಕಾಗುತ್ತದೆ. ಹಾಗಾಗಿ ಎರಡು ವಾರ ವಿಶ್ರಾಂತಿ ಪಡೆಯಬೇಕು. ಇದನ್ನು ಹೊರತುಪಡಿಸಿ ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಸಿದ್ದರಾಮಯ್ಯ ಕೊಪ್ಪಳ ಚುನಾವಣಾ ಪ್ರಚಾರದಲ್ಲಿದ್ದಾಗ ನೂಕು-ನುಗ್ಗುಲು ಉಂಟಾಗಿತ್ತು. ಆ ವೇಳೆ ಸಿದ್ದರಾಮಯ್ಯನವರ ಕೈಗೆ ಗಾಯವಾಗಿತ್ತು. ಕೈ ಗಾಯ ನಡುವೆಯೂ ಸಿದ್ದರಾಮಯ್ಯ ಅಬ್ಬರದ ಪ್ರಚಾರ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಇರುವ ಸಿದ್ದರಾಮಯ್ಯನವರ ಸರ್ಕಾರಿ ನಿವಾಸಕ್ಕೆ ವೈದ್ಯರು ಆಗಮಿಸಿದ್ದು, ಮನೆಯಲ್ಲೇ ಚಿಕಿತ್ಸೆ ನೀಡಿದ್ದಾರೆ.