Monday, March 27, 2023
spot_img
- Advertisement -spot_img

ಶ್ರೀ ಸಿದ್ದೇಶ್ವರ ಸ್ವಾಮಿಜಿ ಲಿಂಗೈಕ್ಯ : ಪ್ರಧಾನಿ ಮೋದಿ, ಜೆಡಿಎಸ್‌ ವರಿಷ್ಠ ಹೆಚ್ ಡಿ ದೇವೇಗೌಡ ಸೇರಿದಂತೆ ಹಲವು ಗಣ್ಯರಿಂದ ಸಂತಾಪ

ವಿಜಯಪುರ: ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಜಿ ಲಿಂಗೈಕ್ಯರಾಗಿದ್ದು, ನಾನಾ ಮಠದ ಸ್ವಾಮೀಜಿಗಳು, ರಾಜಕಾರಣಿಗಳು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಪರಂಧಾಮ ಸೇರಿದ ವಿಷಯ ತಿಳಿದು ವಿಷಾದವಾಗಿದೆ, ವೈಕುಂಠ ಏಕಾದಶಿ ಪರ್ವದಿನ ಅವರು ತೆರಳಿರುವುದು ಅವರ ಜೀವನ ಸಾರ್ಥಕ್ಯಕ್ಕೆ ಕನ್ನಡಿಯಂತಿದೆ. ಅವರು ಸರಳತೆಗ ಪರ್ಯಾಯವಾಗಿದ್ದರು. ಆಡಂಬರ ಸ್ಪರ್ಶವಿಲ್ಲದೇ ವಿರಕ್ತ ಜೀವನ ನಡೆಸುವವರಿಗೆ ಮಾದರಿಯಾದವರು, ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ಆತ್ಮಕ್ಕೆ ಶ್ರೀ ಕೃಷ್ಣ ಸದ್ಗತಿ ಕರುಣಿಸಲಿ ಎಂದು ಉಡುಪಿಯ ಶ್ರೀ ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದರು ವಿಷಾದಿಸಿದ್ದಾರೆ.

ಶ್ರೀಗಳ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿ , ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, ಅನಾರೋಗ್ಯದಿಂದ ಬಳಲುತ್ತಿದ್ದ ಮಹಾಚೇತನವನ್ನು ಮೊನ್ನೆಯಷ್ಟೇ ಕಂಡು, ಅವರ ಆರೋಗ್ಯ ವಿಚಾರಿಸಿ ಬಂದಿದ್ದೆವು. ಭಗವಂತ ಅವರಿಗೆ ಇನ್ನಷ್ಟು ಆಯುಷ್ಯ ನೀಡಲಿ ಎಂದು ಪ್ರಾರ್ಥಿಸಿದ್ದೆ‌. ಆದರೆ, ಭಗವಂತನ ಇಚ್ಛೆ ನಮ್ಮೆಲ್ಲರನ್ನೂ ಮೀರಿದ್ದಾಗಿದೆ ಎಂದು ದು:ಖ ವ್ಯಕ್ತಪಡಿಸಿದರು.ಶ್ರೀಗಳ ಸರಳ ನಡೆ-ನುಡಿ, ಕೋಟ್ಯಂತರ ಹೃದಯತಟ್ಟಿದ ಅವರ ದಿವ್ಯವಾಣಿ, ಜನರಲ್ಲಿ ಆಧ್ಯಾತ್ಮದ ಚಿರಂತನ ಬೆಳಕನ್ನು ತುಂಬಿ‌ ಅವರ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಅವರ ಅಗಲಿಕೆಯ ದುಃಖವನ್ನು ತಡೆಯುವ ಶಕ್ತಿ ಪರಮಾತ್ಮ ಭಕ್ತರೆಲ್ಲರಿಗೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಸಿಎಂ ಬೊಮ್ಮಾಯಿಯವರು ಟ್ವೀಟ್ ಮಾಡಿ, ವಿಜಯಪುರದ ಜ್ಞಾನ ಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಲಿಂಗೈಕ್ಯರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ತಮ್ಮ ಪ್ರವಚನಗಳ ಮೂಲಕ ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಶ್ರೀಗಳ ಸೇವೆ ಅಮೋಘ ಹಾಗೂ ಅನನ್ಯವಾದುದು. ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಗಿದೆ. ಶ್ರೀಗಳ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ನಾಡಿನಾದ್ಯಂತ ಇರುವ ಶ್ರೀಗಳ ಭಕ್ತ ಸಮೂಹಕ್ಕೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ ಎಂದು ತಿಳಿಸಿದ್ದಾರೆ.

ಸಿದ್ದೇಶ್ವರ ಸ್ವಾಮೀಜಿ ಅಗಲಿಕೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ. ದೇಶ ಕಂಡ ಶ್ರೇಷ್ಠ ಸಂತರು, ಆಧ್ಯಾತ್ಮಿಕ ಪ್ರವಚನಕಾರರಾದ ಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾದ ಸುದ್ದಿ ತಿಳಿದು ಮನಸ್ಸಿಗೆ ಅತೀವ ದುಃಖ ಉಂಟು ಮಾಡಿದೆ ಎಂದು ದೇವೇಗೌಡರು ಕಂಬನಿ ಮಿಡಿದಿದ್ದಾರೆ.

ಸಿದ್ದೇಶ್ವರ ಸ್ವಾಮೀಜಿಗಳ ಲಿಂಗೈಕ್ಯಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಕಣ್ಣೀರು ಹಾಕಿದ್ದಾರೆ. ಸ್ವಾಮೀಜಿಯವರು ತಮ್ಮ ನಿಷ್ಕಾಮ ಕರ್ಮದಿಂದಾಗಿ ‘ನಡೆದಾಡುವ ದೇವರು’ ಎಂದೇ ಜನಮಾನಸದಲ್ಲಿ ಹೆಸರಾಗಿದ್ದರು. ತಾವು ಪಡೆದದ್ದೆಲ್ಲವನ್ನೂ ಸಮಾಜಕ್ಕೆ ಸಲ್ಲಿಸಬೇಕೆಂಬುದೇ ಅವರ ಬದುಕಿನ ಪರಮ ಧ್ಯೇಯವಾಗಿತ್ತು. ಪ್ರತಿಯೊಂದು ವಸ್ತುವಿನಲ್ಲೂ ಭಗವಂತನ ಚೈತನ್ಯವನ್ನು ಅನುಭವಿಸಿ, ಅದನ್ನು ಬೇರೆಯವರಿಗೂ ಮನ ಮುಟ್ಟುವಂತೆ ವಿವರಿಸುತ್ತಿದ್ದರು ಎಂದು ಅವರು ಸ್ಮರಿಸಿದ್ದಾರೆ.

Related Articles

- Advertisement -

Latest Articles