ಹುಬ್ಬಳ್ಳಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜೂನ್, ಜುಲೈ ತಿಂಗಳಿನಿಂದಲೇ ನಾವು ಕೊಟ್ಟ ಎಲ್ಲಾ ಭರವಸೆಗಳನ್ನು ಜಾರಿಗೊಳಿಸಲಾಗುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ಕುಟುಂಬದ ಮಹಿಳೆಗೆ 2,000 ರೂ ಮತ್ತು ಪ್ರತಿ ಮನೆಗೆ 10 ಕೆಜಿ ಉಚಿತ ಅಕ್ಕಿ ಜೊತೆಗೆ ಇನ್ನೆರಡು ಭರವಸೆಗಳನ್ನು ಶೀಘ್ರದಲ್ಲೇ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.
ಒಂದು ವೇಳೆ ಜನರಿಗೆ ನೀಡುತ್ತಿರುವ ಭರವಸೆ ಈಡೇರಿಸಲು ವಿಫಲವಾಗಿದ್ದೇ ಆದರೆ, ಅಧಿಕಾರದಿಂದ ಕೆಳಗಿಳಿಯುತ್ತೇವೆಂದು ಹೇಳಿದರು. ಬಿಜೆಪಿ ಶಾಸಕನ ಭ್ರಷ್ಟಾಚಾರ ಪ್ರಕರಣದಲ್ಲಿ ವಿರೂಪಾಕ್ಷಪ್ಪರನ್ನು ಸರಕಾರ ಕೂಡಲೇ ಬಂಧಿಸದೆ ರಕ್ಷಣೆಗೆ ಯತ್ನಿಸುತ್ತಿದೆ. ಶಾಸಕ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರೆ, ಅವರು ಮನೆಯಲ್ಲಿಯೇ ಇದ್ದಾರೆ ಎಂದು ದಾಖಲೆಯಲ್ಲಿ ಒಪ್ಪಿಕೊಂಡಿದ್ದಾರೆ.
ಬೊಮ್ಮಾಯಿ ತಮ್ಮ ಶಾಸಕರನ್ನು ರಕ್ಷಿಸುತ್ತಿದ್ದಾರೆ ಮತ್ತು ಪ್ರಧಾನಿ ಮೋದಿ ಭ್ರಷ್ಟ ಸರ್ಕಾರವನ್ನು ಪರೋಕ್ಷವಾಗಿ ರಕ್ಷಣೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆಂದು ಆರೋಪಿಸಿದರು. ಈಗಾಗಲೇ 400 ಕ್ಯಾಂಟೀನ್ ಗಳು ಕಾರ್ಯನಿರ್ವಹಿಸುತ್ತಿಲ್ಲ. ಬಿಜೆಪಿ ಸರ್ಕಾರ ಬಡವರ ವಿರೋಧಿಯಾಗಿದೆ. ಕ್ಯಾಂಟೀನ್‌ಗಳನ್ನು ಮುಚ್ಚಲು ಬಿಜೆಪಿ ಸರ್ಕಾರ ನಿರ್ಧರಿಸಿದ್ದೇ ಆದ್ರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.