ಚಿಕ್ಕಮಗಳೂರು: ನಮ್ಮಪ್ಪ ಹೆಸರಿಟ್ಟಿಲ್ವಾ? ನಾನು ಹಿಂದೂ ಅಲ್ವಾ? ಇವನ್ಯಾವನು ನನ್ನನ್ನು ಸಿದ್ರಾಮುಲ್ಲಾ ಖಾನ್ ಅನ್ನೋಕೆ ಎಂದು ಏಕವಚನದಲ್ಲೇ ಸಿ.ಟಿ.ರವಿ ವಿರುದ್ಧ ವಾಗ್ದಾಳಿ ನಡೆಸಿದರು.
ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯಲ್ಲಿ ನಡೆದ ಕಾಂಗ್ರೆಸ್ನ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿ, ಮುಖ್ಯಮಂತ್ರಿಯಾಗಿ ಜನರಿಗಾಗಿ ಮಾಡಿರುವ ಸೇವೆಯನ್ನು ಗುರುತಿಸಿ ಬಹಳಷ್ಟು ಜನ ನನ್ನನ್ನು ‘ಅನ್ನರಾಮಯ್ಯ’, ರೈತರಾಮಯ್ಯ, ಕನ್ನಡ ರಾಮಯ್ಯ, ದಲಿತರಾಮಯ್ಯ ಎಂದೆಲ್ಲಾ ಕರೆಯುತ್ತಾರೆ. ಅದೇ ರೀತಿ ಮುಸ್ಲಿಮ್ ಸಮುದಾಯಕ್ಕೆ ನಾನು ಮಾಡಿರುವ ಕೆಲಸವನ್ನು ಗುರುತಿಸಿ ನನ್ನನ್ನು ‘ಸಿದ್ರಮುಲ್ಲಾ ಖಾನ್’ ಎಂದು ಕರೆದರೆ ಅದಕ್ಕೂ ಖುಷಿಪಡುವೆ ಎಂದು ಸಿ.ಟಿ.ರವಿ ಸಿದ್ರಾಮುಲ್ಲಾ ಖಾನ್ ಹೇಳಿಕೆಗೆ ನಯವಾಗಿ ತಿರುಗೇಟು ನೀಡಿದ್ದರು.
ಆದರೀಗ ಇವನ್ಯಾರು ಸಿದ್ರಾಮುಲ್ಲಾ ಖಾನ್ ಅನ್ನೋಕೆ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಈ ಹಿಂದೆ ಸಿದ್ದರಾಮಯ್ಯ ಅವರನ್ನು ಟೀಕಿಸುತ್ತಾ ಸಿದ್ರಾಮುಲ್ಲಾ ಖಾನ್ ಎಂದು ಹೆಸರಿಟ್ಟಿದ್ದರು. ಈ ಬಗ್ಗೆ ಅಂದು ಸೈಲೆಂಟ್ ಆಗಿದ್ದ ಸಿದ್ದರಾಮಯ್ಯ ಇದೀಗ ಕ್ಷೇತ್ರದಲ್ಲಿ ನಿಂತು ಸಿ.ಟಿ.ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿ.ಟಿ.ರವಿಯಿಂದ ನಾವು ಪ್ರಾಮಾಣಿಕತೆಯ ಪಾಠ ಕಲಿಯಬೇಕಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಮಿಸ್ಟರ್ ಸಿ.ಟಿ.ರವಿ, 40 ಪರ್ಸೆಂಟ್ ಸರ್ಕಾರ ಎಂದು ಹಿಂದೆಂದು ಯಾವ ಪಕ್ಷಕ್ಕೂ ಹೇಳಿಲ್ಲ. ಏನು ಹೇಳ್ತೀಯಪ್ಪಾ… ಮಿಸ್ಟರ್ ಸಿ.ಟಿ.ರವಿ.. ನನ್ನ ಮೇಲೆ ಈ ರೀತಿ ಒಬ್ಬನೇ ಒಬ್ಬ ಆರೋಪ ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು. ಈ ಸರ್ಕಾರ (ಬಿಜೆಪಿ) ಎಲ್ಲದಕ್ಕೂ ಹಣ, ಹಣ ಅಂತಿದೆ, ಈ ಸರ್ಕಾರ ಬೇಕಾ ನಿಮಗೆ ಎಂದು ಪ್ರಶ್ನಿಸಿ ಆರ್ಎಸ್ಎಸ್ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.