ಕಲಬುರಗಿ : ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅಮಾವಾಸ್ಯೆ, ಅದಕ್ಕೆ ನಾನು ಅಮಾವಾಸ್ಯೆ ಎಂದು ಕರೆಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದರು.
ಕಲಬುರಗಿ ಜಿಲ್ಲೆಯ ಚಿತಾಪುರ ತಾಲೂಕಿನಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿ, ರೈತರ ಸಾಲ ಮನ್ನಾ ಮಾಡುವುದರಿಂದ ದೇಶಕ್ಕೆ ನಷ್ಟ ಆಗುತ್ತದೆ. ಆರ್ಥಿಕ ಪರಿಸ್ಥಿತಿ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಹೇಳಿಕೆ ತೇಜಸ್ವಿ ಸೂರ್ಯ ನೀಡಿದ್ದು, ಈ ಮಾತನ್ನು ಯಾರೂ ಖಂಡಿಸಿಲ್ಲ ಎಂದು ಹೇಳಿದರು.
ಓರ್ವ ಸಂಸದನಾಗಿ ಇಂತಹ ಹೇಳಿಕೆ ನೀಡುತ್ತಾನೆ ಎಂದರೆ, ಇದು ಬಿಜೆಪಿಯ ಆಂತರಿಕ ಚಿಂತನೆ ಎಂದು ಏಕವಚನದಲ್ಲೇ ಕಿಡಿಕಾರಿದರು. ಕಾರ್ಪೊರೇಟ್ ವಲಯದ ಸಾಲ ಮನ್ನಾ ಮಾಡಿದ್ದಾರೆ. ಆದರೆ ರೈತರ ಸಾಲ ಮನ್ನಾ ಮಾಡಲು ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಶಾಸಕ ಜಮೀರ್ ಅಹ್ಮದ್ ಮಾತನಾಡಿ, ರಾಜ್ಯದಲ್ಲಿ 2013 ರಿಂದ 2018ರವರೆಗೂ ಹಸಿದವಿನಿಂದ ಬಳಲಿದವರನ್ನು ರಕ್ಷಣೆ ಮಾಡಿದ್ದು,ನಮ್ಮ ಸಿದ್ದರಾಮಯ್ಯ ಸರ್ಕಾರ ಎಂದು ಹೇಳಿದ್ದಾರೆ.ಸಿದ್ದರಾಮಯ್ಯ ಅವಧಿಯಲ್ಲಿ ಸಾಕಷ್ಟು ಯೋಜನೆ ಬಡವರಿಗೆ ನೀಡಿದೆ. ಇವುಗಳು ಹೇಳಿಕೊಳ್ಳುವಂತಹ ಯೋಜನೆಗಳಾಗಿವೆ ಎಂದರು.
ಈ ಬಾರಿ ನೂರಕ್ಕೆ ನೂರರಷ್ಟು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ಕರ್ನಾಟಕದ ಜನರು ಈ ಬಾರಿ ಬಿಜೆಪಿ ಪಕ್ಷವನ್ನು ತಿರಸ್ಕಾರ ಮಾಡಲಿದ್ದಾರೆ ಎಂದು ತಿಳಿಸಿದರು.