ಮೈಸೂರು: ಶೋಷಣೆ, ಅನ್ಯಾಯ ಇದೇ ರೀತಿ ಮುಂದುವರಿದರೆ ಪ್ರಜಾಪ್ರಭುತ್ವವನ್ನು ಪ್ರಜೆಗಳೇ ಧ್ವಂಸ ಮಾಡುತ್ತಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ನಂಜನಗೂಡು ತಾಲೂಕಿನ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಆಟದ ಸ್ಪರ್ಧೇ ಉದ್ಘಾಟಿಸಿ ಮಾತನಾಡಿ, ಆರ್ಥಿಕ ಸ್ವಾವಲಂಬನೆ, ಸಂಪತ್ತನ್ನು ಎಲ್ಲರಿಗೂ ಹಂಚಿದಾಗ ಮಾತ್ರ ನಿಜವಾದ ಸ್ವಾತಂತ್ರ್ಯ ಸಿಗುತ್ತದೆ. ಮನುಷ್ಯನಿಗೆ ಧರ್ಮ ಇರಬೇಕು, ಧರ್ಮಕ್ಕೋಸ್ಕರ ಮನುಷ್ಯನಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಹಿಂದೆ ಹೆಣ್ಣು ಮಕ್ಕಳ ಮೇಲೆ, ದಲಿತರ ಮೇಲೆ ಶೋಷಣೆ ನಡೆಯುತ್ತಿತ್ತು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದಿಂದ ಎಲ್ಲರೂ ಈಗ ಸಮಾನರಾಗಿದ್ದಾರೆ. ಎಲ್ಲರಿಗೂ ಸಮಾನ ಹಕ್ಕುಗಳು ಸಿಕ್ಕಿವೆ. ಆರ್ಥಿಕ ಅಸಮಾನತೆ ತೊಲಗಿಸಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದಿಂದ ಎಲ್ಲರೂ ಈಗ ಸಮಾನರಾಗಿದ್ದಾರೆ. ಎಲ್ಲರಿಗೂ ಸಮಾನ ಹಕ್ಕುಗಳು ಸಿಕ್ಕಿವೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಭಾಷಣ ಹೊಡೆದರೆ ಸಾಲದು ಎಂದು ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಗುಡುಗಿದರು.
ರೈತರು, ಶಿಕ್ಷಕರು, ಸೈನಿಕರನ್ನು ನಾವು ಯಾವಾಗಲೂ ಸ್ಮರಿಸಬೇಕು. ಯಾಕೆಂದರೆ, ಇವರಲ್ಲಿ ಯಾವುದೇ ಸ್ವಾರ್ಥವಿಲ್ಲ. ನಾನು ಎನ್ನುವ ಬದಲು ನಾವು ಎಂದು ಬದುಕಿದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸುತ್ತೂರು ಶ್ರೀಗಳು ಶಿಕ್ಷಣವನ್ನು ನೀಡಿ ಅವರ ಬಾಳಲ್ಲಿ ಬೆಳಕಾಗಿದ್ದಾರೆ ಎಂದು ಹೇಳಿದರು.