ಬೆಂಗಳೂರು : ರಾಜ್ಯದಲ್ಲಿ ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಕುರಿತು ಕಳೆದೆರಡು ದಿನಗಳ ಹಿಂದಷ್ಟೇ ಘೋಷಣೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಈ ವಿಚಾರವಾಗಿ ಇದೀಗ ಮೌನವಾದ್ರಾ? ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಪೊಲಿಟಿಕಲ್ 360ಗೆ ಇಂದು ಒಂದೇ ಸಾಲಿನ ಉತ್ತರ ನೀಡಿರುವ ಅವರ ನಡೆಯೀಗ ನಿಗೂಢವಾಗಿದೆ. ಮೈತ್ರಿ ವಿಚಾರವಾಗಿ ಹೈಕಮಾಂಡ್ ಬಳಿ ಮತ್ತೆ ಚರ್ಚೆ ಆಗಿದೆಯಾ ಎಂಬ ಪ್ರಶ್ನೆಗೆ, ‘ಏನೂ ಗೊತ್ತಿಲ್ಲಪ್ಪ’ ಎಂದಷ್ಟೇ ಮುಂದೆ ಸಾಗಿದ್ದಾರೆ.
ಇದನ್ನೂ ಓದಿ : Photos: ರಾಷ್ಟ್ರಪತಿಗಳ ಜಿ20 ಔತಣಕೂಟದಲ್ಲಿ ಸಿಎಂ ಮಮತಾ, ನಿತೀಶ್ ಭಾಗಿ!
ಈಗಾಗಲೇ ಎರಡೂ ಪಕ್ಷಗಳ ಮೈತ್ರಿಯ ಕುರಿತು ಉಭಯ ಪಕ್ಷಗಳಲ್ಲಿ ಅಪಸ್ವರಗಳು, ವ್ಯತಿರಿಕ್ತ ಹೇಳಿಕೆಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಅವರು ಸೈಲೆಂಟ್ ಆಗಿದ್ದಾರಾ? ಎಂಬ ಪ್ರಶ್ನೆ ಮೂಡುತ್ತಿದೆ.
ಅಲ್ಲದೆ, ಮೈತ್ರಿಯನ್ನು ಖದ್ದಾಗಿಯೇ ಘೋಷಿಸಿದ್ದ ಬಿಜೆಪಿ ಹಿರಿಯ ನಾಯಕ ಈಗ್ಯಾಕೆ ಈ ವಿಚಾರದಲ್ಲಿ ತುಟಿ ಬಿಚ್ಚುತ್ತಿಲ್ಲ ಎನ್ನುವುದು ಸಧ್ಯ ಬಿಜೆಪಿ ನಾಯಕರಲ್ಲಿಯೇ ಗೊಂದಲಕ್ಕೆ ಕಾರಣವಾಗಿದೆ. ಮೈತ್ರಿಯ ಜೊತೆಗೆ ಸ್ಥಾನಗಳನ್ನು ಹಂಚಿಕೊಳ್ಳುವ ಬಗ್ಗೆಯೂ ಸುಳಿವು ನೀಡಿದ್ದ ಯಡಿಯೂರಪ್ಪ ಮೌನದ ಹಿಂದೆ ಬೇರೆ ಯಾವುದೋ ಒಂದು ರಾಜಕೀಯ ಲೆಕ್ಕಾಚಾರ ಇದೆ ಎಂದು ಹೇಳಲಾಗುತ್ತಿದೆ.
ಈ ಮೈತ್ರಿಯ ವಿಚಾರವಾಗಿ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರೂ ಸಹ ‘ಈ ಕುರಿತು ಚರ್ಚಿಸಲು ಇನ್ನೂ ಸಮಯವಿದೆ’ ಎಂದು ಹೇಳುವ ಮೂಲಕ ಅಡ್ಡಗೋಡೆಯ ಮೇಲೆ ದೀಪವಿಡುವಂತ ಹೇಳಿಕೆ ನೀಡಿದ್ದರು. ಅವರ ಹೇಳಿಕೆಯ ಬೆನ್ನಲ್ಲೆ ಇದೀಗ ಬಿಎಸ್‌ವೈ ಸಹ ಇದೇ ರೀತಿಯಾಗಿ ಹೇಳಿಕೆ ನೋಡಿದರೆ, ಎರಡೂ ಪಕ್ಷಗಳಲ್ಲಿ ಮೈತ್ರಿಯ ಕುರಿತು ಸ್ಪಷ್ಟ ನಿಲುವು ಮೂಡಿದಂತೆ ಕಾಣದಿರುವುದು ಈ ತೆರನಾದ ಹೇಳಿಕೆಗಳಿಗೆ ಕಾರಣವಾಗಿದೆ.
ಯಡಿಯೂರಪ್ಪ ಘೋಷಿಸಿದ್ದ ಕಮಲ-ದಳ ಮೈತ್ರಿ ವಿಚಾರ..
2024ರ ಲೋಕಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಜಾತ್ಯತೀತ ಜನತಾ ದಳ (ಜೆಡಿಎಸ್) ಜೊತೆ ಹೊಂದಾಣಿಕೆ ಮಾಡಿಕೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಶುಕ್ರವಾರವಷ್ಟೇ ಘೋಷಿಸಿದ್ದರು.
ನಗರದ ಫ್ರೀಡಂ ಪಾರ್ಕ್ ನಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸಂತೋಷ ತಂದಿದೆ. ಜೆಡಿಎಸ್ ಗೆ ನಾಲ್ಕು ಸೀಟ್ ಕೊಡಲು ಅಮಿತ್ ಶಾ ಒಪ್ಪಿಕೊಂಡಿದ್ದಾರೆ. ಮೈತ್ರಿಯಿಂದ ನಮ್ಮಗೆ ಶಕ್ತಿ ಬಂದಿದೆ. ಇದರಿಂದ 25ಕ್ಕೂ ಹೆಚ್ಚು ಸೀಟ್ ಗೆಲ್ಲಲು ನಮಗೆ ಸಹಾಯವಾಗಲಿದೆ ಎಂದಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.