ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ಗಾಯಕಿ ವಾಣಿ ಜಯರಾಂ ಕೊನೆಯುಸಿರೆಳೆದಿದ್ದಾರೆ. ಹಿರಿಯ ಖ್ಯಾತ ಗಾಯಕಿ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ವಾಣಿ ಜಯರಾಮ್ ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ವಾಣಿ ಜಯರಾಮ್ ಅವರು ಚೆನ್ನೈನ ನುಂಗಂಬಾಕ್ಕಂನಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಸಾವಿಗೆ ಕಾರಣ ಇನ್ನೂ ತಿಳಿದಿಲ್ಲ,
ಇವರ ನಿಧನಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ಕನ್ನಡ ಸೇರಿದಂತೆ ಇತರ 19 ಭಾಷೆಗಳಲ್ಲಿ ತಮ್ಮ ಗಾನಸುಧೆಯನ್ನು ಹರಿಸಿದ್ದ ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಂ ಇಂದು ನಮ್ಮನ್ನು ಅಗಲಿದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಸಾಹಿತ್ಯಕ್ಕೆ ಭಾವ ತುಂಬಿ ಅವರು ಅನೇಕ ಅದ್ಭುತ ಗೀತೆಗಳನ್ನು ಹಾಡಿದ್ದಾರೆ. ಅವರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ಓಂ ಶಾಂತಿಃ ಎಂದು ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಆರೋಗ್ಯ ಸಚಿವ ಕೆ ಸುಧಾಕರ್, ಗಾಯಕಿ ನಿಧನಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಗಾಯಕಿಗೆ ಇತ್ತೀಚೆಗೆ ಪದ್ಮಭೂಷಣ ಪ್ರಶಸ್ತಿ ಕೂಡ ಘೋಷಣೆಯಾಗಿದೆ. ತಮ್ಮ ಅದ್ಭುತ ಗಾಯನದ ಮೂಲಕ ಜಮಾನಸದಲ್ಲಿ ಅಮರರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಗಾಯಕಿ ನಿಧನಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ. ಅಪರೂಪದ ಹಾಗೂ ಕ್ಲಾಸಿಕಲ್ ಮ್ಯೂಸಿಕ್ ದಿಗ್ಗಜ ಗಾಯಕಿ ನಿಧನ ತೀವ್ರ ದುಃಖ ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ.
ವಾಣಿ ಜಯರಾಂ ಇನ್ನಿಲ್ಲ ಅನ್ನೋ ಸುದ್ದಿ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಎರಡು ದಿನದ ಹಿಂದೆ ಮಾತನಾಡಿದ್ದೆ. ಬಹುಭಾಷ ಹಾಗೂ ದಿಗ್ಗಜ ಗಾಯಕಿ ಇಲ್ಲ ಅನ್ನೋದು ತೀವ್ರ ನೋವಾಗಿದೆ. ಆವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಖ್ಯಾತ ಗಾಯಕಿ ಕೆಎಸ್ ಚಿತ್ರ ಟ್ವೀಟ್ ಮಾಡಿದ್ದಾರೆ.