ಬೆಂಗಳೂರು:ಗೋವಿಂದರಾಜನಗರ ಕ್ಷೇತ್ರದಿಂದ ಸೋಮಣ್ಣ ಬದಲಿಸಬೇಡಿ ಎಂದು ಸಚಿವ ವಿ. ಸೋಮಣ್ಣ ಬೆಂಬಲಿಗರು ಪತ್ರ ಬರೆದಿದ್ದಾರೆ. ಸಚಿವ ವಿ. ಸೋಮಣ್ಣರಿಗೆ ಬೇರೆ ಕ್ಷೇತ್ರ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಸೋಮಣ್ಣ ಬೆಂಬಲಿಗರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಪತ್ರ ಬರೆದಿದ್ದಾರೆ.
ಕ್ಷೇತ್ರ ಬದಲಿಸುವುದಾದಲ್ಲಿ ಪುತ್ರ ಅರುಣ್ ಸೋಮಣ್ಣರಿಗೆ ಗೋವಿಂದರಾಜನಗರ ಕ್ಷೇತ್ರದ ಟಿಕೆಟ್ ನೀಡುವಂತೆ ಕ್ಷೇತ್ರದ ಬಿಜೆಪಿ ಅಧ್ಯಕ್ಷರು, ಮಾಜಿ ಕಾರ್ಪೊರೇಟರ್ಗಳು, ಮೋರ್ಚಾಗಳ ಅಧ್ಯಕ್ಷರು ಸೇರಿ 30 ಕಾರ್ಯಕರ್ತರು ಪತ್ರದ ಮೂಲಕ ಒತ್ತಾಯಿಸಿದ್ದಾರೆ. ಗೋವಿಂದರಾಜನಗರಕ್ಕೆ ಸೋಮಣ್ಣ ಅಥವಾ ಅರುಣ್ ಸೋಮಣ್ಣ ಹೊರತುಪಡಿಸಿ ಬೇರೆಯವರನ್ನು ಅಭ್ಯರ್ಥಿ ಮಾಡಿದರೆ ಕ್ಷೇತ್ರವು ಪಕ್ಷದ ಕೈ ತಪ್ಪಲಿದೆ. ಮಾತ್ರವಲ್ಲದೆ ವಿಜಯನಗರ, ರಾಜಾಜಿನಗರ, ಚಿಕ್ಕಪೇಟೆ ಮತ್ತು ಮಹಾಲಕ್ಷ್ಮೀ ಲೇಔಟ್ ಕ್ಷೇತ್ರಗಳ ಮೇಲೂ ಪರಿಣಾಮ ಬೀರಲಿದೆ.
ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ಹಿನ್ನೆಡೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಸೋಮಣ್ಣ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದ್ದು,ಸಿದ್ದರಾಮಯ್ಯ ಸ್ಪರ್ಧಿಸುವ ವರುಣಾ ಕ್ಷೇತ್ರದ ಟಿಕೆಟ್ ಸೋಮಣ್ಣ ಅವರಿಗೆ ನೀಡಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು.