ಬೆಂಗಳೂರು : ಸಿಎಂ ಆಗ್ತೇವೆ ಎಂದು ಕೆಲವರು ಶರ್ಟ್, ಪ್ಯಾಂಟ್ ಹೊಲಿಸಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟಾಂಗ್ ಕೊಟ್ಟರು.
ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಿಎಂ ಆಗ್ತೇವೆ ಅಂತಾ ಕೆಲವರು ಕೋಟ್ ಹೊಲಿಸಲು ಅಂಗಡಿಗೆ ಕೊಟ್ಟಿದ್ದಾರೆ. ಇನ್ನೂ ಕೆಲವರು ಹೊಸ ಪ್ಯಾಂಟ್ ಶರ್ಟ್ ಖರೀದಿಸಿದ್ದಾರೆ. ಇನ್ನೂ ಕೆಲವರು ಅವರೊಳಗೇ ಪ್ಯಾಂಟ್, ಶರ್ಟ್ ಹರಿಯಲು ಶುರು ಮಾಡಿದ್ದಾರೆ. ಮೂರು ಪಾರ್ಟಿಯಲ್ಲಿ ಮೂರು ವಿಭಿನ್ನತೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್, ಜೆಡಿಎಸ್ ಮನೆ ಖಾಲಿ ಆಗುತ್ತಿದೆ. ಬೊಮ್ಮಾಯಿ ನೇತೃತ್ವ, ಯಡಿಯೂರಪ್ಪರ ಮಾರ್ಗದರ್ಶನದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಿರೋಧ ಪಕ್ಷವಾಗಲು ನಾಲಾಯಕ್ ಎಂಬ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆ ಎಂದು ಟೀಕಿಸಿದರು.
ಇನ್ನೂ ಇದೇ ವೇಳೆ ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ್ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ನಂತರ ಮಾತನಾಡಿ, ಸರ್ಕಾರದ ಕೆಲಸದಿಂದ ನಾಲ್ಕು ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ದೇನೆ. ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳ ಬಗ್ಗೆ ತಿಳಿದುಕೊಂಡಿದ್ದೇನೆ. ಇದು ಜನಪರವಾದ ಸರ್ಕಾರವಾಗಿದ್ದು ಪ್ರಧಾನಿ ನರೇಂದ್ರ ಮೋದಿ, ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಅವರು ಪ್ರಗತಿ ಪರ ಕೆಲಸ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.