ಹೈದರಾಬಾದ್ : ಮುಂಬರುವ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನನ್ನನ್ನು ಸಿಎಂ ಮಾಡುವುದಾಗಿ ಸೋನಿಯಾ ಗಾಂಧಿ ಹೇಳಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಸಂಸದ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಹೇಳಿಕೆ ನೀಡಿರುವುದು ಚರ್ಚೆಗೆ ಕಾರಣವಾಗಿದೆ.
ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಅವರು ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ಸಿಎಂ ಅಗುವ ಕುರಿತು ಹೇಳಿಕೆ ನೀಡಿದ್ದಾರೆ. ಈ ಕುರಿತ ಐದು ಸೆಕೆಂಡ್‌ಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಚುನಾವಣೆಗೂ ಮುನ್ನ ಕೋಮಟಿರೆಡ್ಡಿ ಸಿಎಂ ಸ್ಥಾನದ ಬಗ್ಗೆ ಹೇಳಿಕೆ ನೀಡಿರುವುದು ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟಕ್ಕೆ ಕಾರಣವಾಗಬಹುದು ಎಂದು ಕೆಲ ವರದಿಗಳು ಹೇಳಿವೆ. ಯಾಕೆಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿಎಂ ಆಗುವವರ ಸಾಲಿನಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ, ಮಾಜಿ ಅಧ್ಯಕ್ಷ ಉತ್ತಮ್ ರೆಡ್ಡಿ, ಪಕ್ಷದ ಹಿರಿಯ ನಾಯಕ ಮಧು ಯಕ್ಷಿ ಗೌಡ್ ಸೇರಿದಂತೆ ಅನೇಕರಿದ್ದಾರೆ. ಅದರಲ್ಲೂ ರೇವಂತ್ ರೆಡ್ಡಿ ಮುಂಚೂಣಿಯಲ್ಲಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಾಯಕರು ಇದುವರೆಗೆ ಯಾರನ್ನೂ ತೆಲಂಗಾಣಕ್ಕೆ ಸಿಎಂ ಅಭ್ಯರ್ಥಿಯಾಗಿ ಘೋಷಣೆ ಮಾಡಿಲ್ಲ.
ಇದನ್ನೂ ಓದಿ : ದೆಹಲಿಯಲ್ಲಿ ಹದಗೆಟ್ಟ ವಾಯು ಮಾಲಿನ್ಯ: ಜೈಪುರಕ್ಕೆ ಶಿಫ್ಟ್ ಆದ ಸೋನಿಯಾ ಗಾಂಧಿ
ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಅವರು 2019 ರಿಂದ ಭುವನಗಿರಿ ಕ್ಷೇತ್ರದ ಸಂಸತ್ ಸದಸ್ಯರಾಗಿದ್ದಾರೆ. 2022 ರಿಂದ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಸ್ಟಾರ್ ಪ್ರಚಾರಕರೂ ಆಗಿದ್ದಾರೆ. ಅಲ್ಲದೆ ಅವರು ತೆಲಂಗಾಣ ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪ ನಾಯಕ ಮತ್ತು ನಲ್ಗೊಂಡ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರೂ ಹೌದು.
ತೆಲಂಗಾಣ ವಿಧಾನಸಭಾ ಚುನಾವಣೆಯ ಮತದಾನ ನವೆಂಬರ್ 30ರಂದು ನಡೆಯಲಿದ್ದು, ಡಿಸೆಂಬರ್ 3ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.