ಬೆಂಗಳೂರು: ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಮಹಿಳೆ ಮತ್ತು ಮಗುವಿನ ಮೇಲೆ ಬಿದ್ದಿರುವುದು ತುಂಬಾ ಆಘಾತಕಾರಿ ಎಂದು ಶಾಸಕಿ ಸೌಮ್ಯಾ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು. ಇದು ಕಳಪೆ ಕಾಮಗಾರಿಗೆ ಸ್ಪಷ್ಟ ಉದಾಹರಣೆಯಾಗಿದೆ. ರಾಜ್ಯ ಸರ್ಕಾರದ ಕಳಪೆ ಕಾಮಗಾರಿಯಿಂದ ಬೆಂಗಳೂರು ಮತ್ತು ರಾಜ್ಯದ ಜನ ಬೇಸತ್ತಿದ್ದಾರೆ ಎಂದು ಕಿಡಿಕಾರಿದರು.
ನಾಗವಾರ ಬಳಿ ಮಂಗಳವಾರ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ದಿಢೀರ್ ಕುಸಿದುಬಿದ್ದ ಪರಿಣಾಮ ತಾಯಿ ಹಾಗೂ ಎರಡು ವರ್ಷದ ಮಗು ಮೃತಪಟ್ಟಿದ್ದು, ಇದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ. ಇಲ್ಲಿಯವರೆಗೆ ಜನ ರಸ್ತೆ ಗುಂಡಿಗಳಿಗೆ ಬಲಿಯಾಗುತ್ತಿದ್ದರು. ಈಗ ಪಿಲ್ಲರ್ ಗಳಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದು ಬಿಜೆಪಿ ಸರ್ಕಾರದ ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಆಕ್ರೋಶಿಸಿದ್ದಾರೆ.
ನಾಗವಾರ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ದಿಢೀರ್ ಕುಸಿದುಬಿದ್ದ ಪರಿಣಾಮ ಮೃತಪಟ್ಟ ತಾಯಿ ಹಾಗೂ ಎರಡು ವರ್ಷದ ಮಗುವಿನ ಕುಟುಂಬಸ್ಥರಿಗೆ ಸಿಎಂ ಪರಿಹಾರ ನಿಧಿಯಿಂದ ತಲಾ 10 ಲಕ್ಷ ರೂಪಾಯಿ ಹಾಗೂ ಬಿಎಂಆರ್ ಸಿಎಲ್ ನಿಂದ 20 ಲಕ್ಷ ರೂ. ಪರಿಹಾರವನ್ನು ಪ್ರಕಟಿಸಲಾಗಿದೆ. ಜೊತೆಗೆ ಘಟನೆ ಸಂಬಂಧ ಸಮಗ್ರ ತನಿಖೆ ನಡೆಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು.