ಮಂಗಳೂರು: ನಾನು ಎಲ್ಲರಿಗೂ ಸ್ಪೀಕರ್. ಈ ಹುದ್ದೆಯನ್ನು ರಾಜಕೀಯ, ಜಾತಿ ಮತ್ತು ಧಾರ್ಮಿಕ ಹಿನ್ನೆಲೆಯಿಂದ ನೋಡಲಾಗುವುದಿಲ್ಲ. ಇದು ಸಾಂವಿಧಾನಿಕ ಸ್ಥಾನವಾಗಿದೆ. ಎಲ್ಲಾ ಗೌರವಗಳು ನನಗಲ್ಲ, ಸ್ಪೀಕರ್ ಹುದ್ದೆಗೆ ಸಲ್ಲಬೇಕು ಎಂದು ಸ್ಪೀಕರ್ ಯು.ಟಿ ಖಾದರ್ ಹೇಳಿದ್ದಾರೆ.
ತೆಲಂಗಾಣದಲ್ಲಿ ಚುನಾವಣಾ ಪ್ರಚಾರದ ವೇಳೆ ವಸತಿ ಮತ್ತು ಅಲ್ಪಸಂಖ್ಯಾತರ ಸಚಿವ ಜಮೀರ್ ಅಹಮದ್ ಖಾನ್ ಅವರು ಇತ್ತೀಚೆಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ವಿಧಾನಸಭೆಯಲ್ಲಿ ಕೇಸರಿ ಪಕ್ಷದ ನಾಯಕರು ಮುಸ್ಲಿಂ ಸ್ಪೀಕರ್ ಎದುರು ತಲೆಬಾಗಿದ್ದಾರೆ, ಕಾಂಗ್ರೆಸ್ ನೀಡಿದ ಅವಕಾಶಕ್ಕೆ ಧನ್ಯವಾದಗಳು ಎಂದು ಜಮೀರ್ ಹೇಳಿದ್ದರು.
ಇದನ್ನೂ ಓದಿ:ʼಮೋದಿ ಗೆಲ್ಲಿಸಿ ಭಾರತ ಉಳಿಸಿ’ ಎಂಬ ಅಭಿಯಾನ ಪ್ರಾರಂಭಿಸ್ತೇವೆ : ಪ್ರಮೋದ್ ಮುತಾಲಿಕ್
‘ವಿಧಾನಸಭಾ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವವರು ಅದರ ಗೌರವವನ್ನು ಕಾಪಾಡಬೇಕು, ಜಮೀರ್ ಅಹಮದ್ ಖಾನ್ ಹೇಳಿಕೆಗೆ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ, ನನ್ನನ್ನು ಜಾತಿಯ ಆಧಾರದ ಮೇಲೆ ಸ್ಪೀಕರ್ ಮಾಡಿಲ್ಲ, ನನ್ನ ಅರ್ಹತೆಗೆ ಅನುಗುಣವಾಗಿ ಸ್ಥಾನ ನೀಡಲಾಗಿದೆ, ನಾನು ನಿರ್ವಹಿಸುತ್ತೇನೆ. ಎಲ್ಲರನ್ನೂ ಗೌರವಿಸುವ ಮೂಲಕ ಈ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ನಾನು ರಾಜಕೀಯ ಪಕ್ಷವನ್ನು ಮೀರಿ ವಿಧಾನಸಭಾ ಸ್ಪೀಕರ್ ಹುದ್ದೆಯನ್ನು ನೋಡಲು ಬಯಸುತ್ತೇನೆ ಎಂದರು.
ಜಮೀರ್ ರಾಜೀನಾಮೆ ನೀಡಲಿ
ಸ್ಪೀಕರ್ ಹುದ್ದೆಗೆ ಸಂಬಂಧಿಸಿದಂತೆ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ ಜಮೀರ್ ಅಹ್ಮದ್ ಖಾನ್ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಾಯಕ ನಳಿನ್ ಕುಮಾರ್ ಕಟೀಲ್ ಒತ್ತಾಯಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಟೀಲ್, ಸ್ಪೀಕರ್ ಹುದ್ದೆಗೆ ಜಮೀರ್ ಖಾನ್ ಅಗೌರವ ತೋರಿದ್ದಾರೆ. ಸ್ಪೀಕರ್ ಹುದ್ದೆಯು ಯಾವುದೇ ಜಾತಿ ಅಥವಾ ಧರ್ಮವನ್ನು ಮೀರಿದೆ ಎಂದಿದ್ದಾರೆ.
ಇದನ್ನೂ ಓದಿ: ವಿಡಿಯೋ ವೈರಲ್ ಬಗ್ಗೆ ಸ್ಪಷ್ಟೀಕರಣ ಕೊಡುವ ಅಗತ್ಯವಿಲ್ಲ: ಡಾ.ಯತೀಂದ್ರ ಸಿದ್ದರಾಮಯ್ಯ
ಜಮೀರ್ ಖಾನ್ ಅವರ ಹೇಳಿಕೆಯು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಮೀರ್ ಅಹಮದ್ ಖಾನ್ ಅವರ ರಾಜೀನಾಮೆ ಕೇಳಬೇಕು” ಎಂದು ಕಟೀಲ್ ಆಗ್ರಹಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.