ನವದೆಹಲಿ : ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನ ಇಂದಿನಿಂದ (ಸೆ.18) ಪ್ರಾರಂಭಗೊಳ್ಳಲಿದೆ. ಮೊದಲ ದಿನ 75 ವರ್ಷಗಳಲ್ಲಿ ಸಂಸತ್ ನಡೆದು ಬಂದ ಹಾದಿಯ ಬಗ್ಗೆ ಚರ್ಚೆ ನಡೆಯಲಿದೆ. 75 ವರ್ಷಗಳ ಸಂಸದೀಯ ಪಯಣದಲ್ಲಿನ ಸಾಧನೆಗಳು, ಅನುಭವಗಳು, ನೆನಪುಗಳು ಮತ್ತು ಕಲಿಕೆಗಳನ್ನು ಈ ಚರ್ಚೆ ಒಳಗೊಳ್ಳಲಿದೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ವಿಶೇಷ ಅಧಿವೇಶನ ಮಹತ್ವ ಪಡೆದುಕೊಂಡಿದೆ. ಕೇಂದ್ರ ಸರ್ಕಾರ ಹಲವು ಮಹತ್ವದ ಮಸೂದೆಗಳಿಗೆ ಅಧಿವೇಶನದಲ್ಲಿ ಅಂಗೀಕಾರ ಪಡೆಯಲು ಸಿದ್ಧತೆ ಮಾಡಿಕೊಂಡಿದೆ. ಇಂದು ಕೊನೆಯ ಬಾರಿಗೆ ಹಳೆಯ ಸಂಸತ್ ಕಟ್ಟದಲ್ಲಿ ಅಧಿವೇಶನ ನಡೆಯಲಿದ್ದು, ನಾಳೆಯಿಂದ ಹೊಸ ಸಂಸತ್ ಭವನ ‘ಸೆಂಟ್ರಲ್ ವಿಸ್ಟಾ’ಗೆ ಕಲಾಪ ಶಿಫ್ಟ್ ಆಗಲಿದೆ.
ನಾಲ್ಕು ಮಸೂದೆಗಳ ಚರ್ಚೆ :
ವಕೀಲರ (ತಿದ್ದುಪಡಿ) ಮಸೂದೆ, ನಿಯತಕಾಲಿಕೆಗಳ ಪತ್ರಿಕಾ ಮತ್ತು ನೋಂದಣಿ ಮಸೂದೆ, ಅಂಚೆ ಕಚೇರಿ ಬಿಲ್, ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ಮಸೂದೆಗಳ ಬಗ್ಗೆ ವಿಶೇಷ ಅಧಿವೇಶನದಲ್ಲಿ ಚರ್ಚೆ ನಡೆಯಲಿದೆ.
ವಿಶೇಷವಾಗಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕ ಮಾಡುವ ಸಮಿತಿಯಿಂದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಿಡುವ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ಮಸೂದೆ ಸಂಸತ್ ನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಈ ಮಸೂದೆಗೆ ಈಗಾಗಲೇ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಮಸೂದೆ ಮಂಡನೆ ವೇಳೆ ಸಂಸತ್ ನಲ್ಲಿ ಗದ್ದಲ ಉಂಟಾಗುವ ಸಾಧ್ಯತೆ ಇದೆ.
ಲೋಕಸಭೆ ಚುನಾವಣೆಗೂ ಮುನ್ನ ಉದ್ದೇಶಿತ ಮಸೂದೆಗಳಿಗೆ ಅಂಗೀಕಾರ ಪಡೆಯುವ ಉದ್ದೇಶದಿಂದಲೇ ಕೇಂದ್ರ ಸರ್ಕಾರ ವಿಶೇಷ ಅಧಿವೇಶನ ಕರೆದಿದೆ ಎನ್ನಲಾಗಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಬಿಜೆಪಿ ತನ್ನ ಎಲ್ಲಾ ಸಂಸತ್ ಸದಸ್ಯರಿಗೆ ಕಡ್ಡಾಯವಾಗಿ ಕಲಾಪಕ್ಕೆ ಹಾಜರಾಗುವಂತೆ ವಿಪ್ ಜಾರಿ ಮಾಡಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.