ಬೆಂಗಳೂರು: ಎನ್‌ಡಿಎ ಮಾದರಿಯಲ್ಲಿ ಮಧ್ಯಮ ಹಂತದ ಪೊಲೀಸರಿಗೆ ತರಬೇತಿ ನೀಡುವ ವ್ಯವಸ್ಥೆ ಜಾರಿಯಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ರಾಷ್ಟ್ರಪತಿಗಳ ಪೊಲೀಸ್ ಪದಕ ಪ್ರದಾನ ಸಮಾರಂಭ-2022ರಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರೊಂದಿಗೆ ಪಾಲ್ಗೊಂಡು, ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಪೊಲೀಸರಿಗೆ ಕಾನೂನು ತಂದೆ ಇದ್ದಂತೆ, ಕರ್ತವ್ಯ ತಾಯಿ ಇದ್ದಂತೆ. ಕರ್ನಾಟಕ ಪೊಲೀಸರು ಯಾವುದೇ ಹೊಸ ತಂತ್ರಜ್ಞಾನದಿಂದ ಹೊರಗುಳಿಯಬಾರು. ಈ ಹೀಗಾಗಿ ಸುಧಾರಣಾ ಕ್ರಮ ತೆಗೆದುಕೊಳ್ಳಬೇಕು. ಸುದೀರ್ಘ ಸೇವೆಯಲ್ಲಿ ರಾಷ್ಟ್ರಪತಿಗಳನ್ನು ನಿಮ್ಮನ್ನು ಗುರುತಿಸುವುದು ರಾಜ್ಯಕ್ಕೆ ಹೆಮ್ಮೆಯ ವಿಷಯ. ತಾವು ಉತ್ತಮ ಕೆಲಸ ಮಾಡಿದಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗುರುತಿಸುತ್ತವೆ. ಪ್ರಶಸ್ತಿ ಪಡೆದವರೆಲ್ಲರೂ ಈ ಪದಕಗಳಿಗೆ ಅರ್ಹರಾಗಿದ್ದು, ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ತಳ ಹಂತ ಪೊಲೀಸರು ಹಾಗೂ ಐಪಿಎಸ್‌ಗಳ ತರಬೇತಿ ಚೆನ್ನಾಗಿ ಆಗುತ್ತಿದೆ. ಆದರೆ ಮಧ್ಯಮ ಹಂತದಲ್ಲಿ ಪೊಲೀಸರ ತರಬೇತಿ ಇನ್ನೂ ಪರಿಣಾಮಕಾರಿಯಾಗಿ ಆಗಬೇಕಿದೆ. ಇದಕ್ಕೆ ಪ್ರತ್ಯೇಕ ತರಬೇತಿ ಸಂಸ್ಥೆ, ಪಠ್ಯ ಹಾಗೂ ವಿವಿಧ ಕೋರ್ಸುಗಳ ಮೂಲಕ ಅವರು ದಕ್ಷತೆಯಿಂದ ಕರ್ತವ್ಯ ನಿರ್ವಹಿಸಲು ಸಹಾಯವಾಗುತ್ತದೆ ಎಂದರು.
ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಅಪರಾಧ ನಿಯಂತ್ರಣ ಮಾಡುವುದು ಪೊಲೀಸರ ಜವಾಬ್ದಾರಿಯಾಗಿದೆ. ಪೊಲೀಸ್ ವ್ಯವಸ್ಥೆಯನ್ನು ಬಹಳ ಆಧುನೀಕರಣ ಮಾಡಿದ್ದೇವೆ. ಫಾರೆನ್ಸಿಕ್ ಲ್ಯಾಬ್ ಆಧುನೀಕರಣ ಮಾಡಲಾಗಿದೆ. ಬೇಕಾದ ಅನುದಾನ ಮುಂದಿನ ಬಜೆಟ್‌ನಲ್ಲಿ ನೀಡಲಾಗುವುದು ಎಂದು ತಿಳಿಸಿದರು.