ಯಾದಗಿರಿ : ನಮ್ಮ ಶಾಸಕರು, ಸಂಸದರು ಯಾರು ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಾಂಗ್ರೆಸ್ ತಮ್ಮ ಹಗರಣ ಮುಚ್ಚಿಕೊಳ್ಳಲು ಆಪರೇಷನ್ ಹಸ್ತದ ಬಗ್ಗೆ ಹೇಳುತ್ತಿದ್ದಾರೆ, ವಿಪಕ್ಷನಾಯಕ, ರಾಜ್ಯಾಧ್ಯಕ್ಷರ ನೇಮಕ ಆದಷ್ಟು ಬೇಗ ಆಗಲಿದೆ. ಶೀಘ್ರದಲ್ಲೇ ಬಿಜೆಪಿ ಹೈಕಮಾಂಡ್ ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಿದರು.
ಒಂದು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬೀಳಿಸಲಿ, ಬಿಜೆಪಿಯೇ ಅಲ್ಲಾಡುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಆ ಖರ್ಗೆಗೆ ಯಾರ ಕನಸು ಬಿದ್ದಿತ್ತು ಏನು, ನಾವ್ಯಾರು ಸರ್ಕಾರ ಕೆಡವುತ್ತೇವೆಂದು ಹೇಳಿದ್ದೇವಾ? ಸಣ್ಣ ಖರ್ಗೆಯವರು ಸೃಷ್ಟಿ ಮಾಡಿಕೊಂಡು ಮಾತನಾಡುತ್ತಾರೆ, ಕಲಬುರಗಿಯಲ್ಲಿ ದೌರ್ಜನ್ಯ ನಡೆಯುತ್ತಿದೆ, ಬಿಜೆಪಿ ಕಾರ್ಯಕರ್ತರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಿದ್ರೆ ಏನು, ಅವರೇನು ಪ್ರಧಾನಮಂತ್ರಿ ಆಗುತ್ತಾರಾ ? ಮುಂದಿನ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತ್ತೆ ಮೋದಿ ಪ್ರಧಾನಮಂತ್ರಿ ಆಗುತ್ತಾರೆ, ರಾಜ್ಯದಲ್ಲಿ ಹೆಚ್ಚಿನ ಸ್ಥಾನ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ; ರಾಜಸ್ಥಾನ: ಮಹಿಳೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ; ಸಿಎಂ ಗೆಹ್ಲೋಟ್ ಖಂಡನೆ
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಮಾತನಾಡಿ, ಇಂಡಿಯಾ ಮೈತ್ರಿಕೂಟಕ್ಕೆ ತೃಪ್ತಿ ಪಡಿಸಲು ನೀರು ಬಿಟ್ಟಿದ್ದಾರೆ, ಸಿಎಂ ಅವರಿಗೆ ರಾಜ್ಯದ ರೈತರ ಬಗ್ಗೆ ಕಾಳಜಿಯಿಲ್ಲ, ನಮ್ಮ ರೈತರ ಬಗ್ಗೆ ಇದುವರೆಗೂ ಕ್ಯಾರೆ ಅಂದಿಲ್ಲ ಎಂದು ಅಭಿಪ್ರಾಯಪಟ್ಟರು.
ಕಾವೇರಿ ನೀರು ತಮಿಳುನಾಡಿಗೆ ಬಿಟ್ಟಿದ್ದಾರೆ, ನದಿ ನೀರು ಕೇಳದಿದ್ದರೂ ಕಾವೇರಿ ನೀರು ಬಿಟ್ಟಿದ್ದಾರೆ, ಗ್ಯಾರಂಟಿ ಯೋಜನೆಗಳು ಲೋಕಸಭಾ ಚುನಾವಣೆ ವರಗೆ ಮಾತ್ರ ಜಾರಿಗೆ ತರುತ್ತಾರೆ, ವಿದ್ಯುತ್ ಬೆಲೆ ಏರಿಕೆ, ವಿದ್ಯುತ್ ಕೊರತೆಯಿಂದ ರೈತರು ತತ್ತರಿಸಿ ಹೋಗಿದ್ದಾರೆ, ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ
ಆದರೆ, ರೈತ ಕುಟುಂಬಸ್ಥರಿಗೆ ಸಾಂತ್ವನ ಹೇಳುವ ಕೆಲಸ ಯಾರು ಮಾಡುತ್ತಿಲ್ಲ ಎಂದು ಆಕ್ರೋಶಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.