ಬೆಳಗಾವಿ : ಜನಾರ್ದನ ರೆಡ್ಡಿಯವರ ವಿಚಾರವಾಗಿ ನಾನು ಮುಖ್ಯಮಂತ್ರಿ ಹಾಗೂ ವರಿಷ್ಠರ ಜೊತೆ ಮಾತನಾಡಿದ್ದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು. ಮಾಧ್ಯಮದ ಜೊತೆಗೆ ಮಾತನಾಡಿ, ರಾಜ್ಯದಲ್ಲಿ ಮತ್ತೊಂದು ಪ್ರಾದೇಶಿಕ ಪಕ್ಷದ ಘೋಷಣೆ ಆಗಿದೆ – ಆಪ್ತ ಸ್ನೇಹಿತ ಜನಾರ್ದನ ರೆಡ್ಡಿಯವರಿಗೆ ನನ್ನ ಶುಭಾಷಯಗಳು ಎಂದು ಹಾರೈಸಿದ್ದಾರೆ.
ಜನಾರ್ದನ ರೆಡ್ಡಿ ಬಹಳ ಬುದ್ಧಿವಂತರಾಗಿದ್ದಾರೆ. ತಿಳುವಳಿಕೆ ಮತ್ತು ಅನುಭವ ಹೊಂದಿರುವ ವ್ಯಕ್ತಿ ಆಗಿದ್ದರಿಂದ ಅವರೇನು ಹೊಸ ಪಕ್ಷ ನಿರ್ಮಾಣ ಮಾಡಿದ್ದಾರೋ, ನಾನು ಅವರು ಬಾಲ್ಯ ಸ್ನೇಹಿತನಾಗಿ ಅವರಿಗೆ ಒಳ್ಳೆದಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ನಾನು ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ. ಕಾಂಗ್ರೆಸ್ ಮುಕ್ತ ಮಾಡಲು ನಾವು ಸಂಕಲ್ಪ ಮಾಡಿದ್ದೇವೆ. ನಮ್ಮ ಪಕ್ಷ ಬೇರೆ, ಅವರ ಪಕ್ಷ ಬೇರೆ ಅವರ ಪಕ್ಷದ ವಿಚಾರವಾಗಿ ನಾನು ಇಲ್ಲಿ ವಾದ ಮಾಡುವುದಕ್ಕೆ ಹೋಗುದಿಲ್ಲ ಎಂದು ಹೇಳಿದರು. ನಮ್ಮ ಪಾರ್ಟಿ ಕಲ್ಯಾಣ ಕರ್ನಾಟದಲ್ಲಿ ತುಂಬಾ ಗಟ್ಟಿಯಾಗಿದೆ, ಇದರಿಂದಾಗಿ ನಮ್ಮ ಪಕ್ಷ ನನಗೆ ದೊಡ್ಡ ಸ್ಥಾನ ನೀಡಿದೆ ಎಂದರು.