ಬೆಂಗಳೂರು : ಎಸ್ಎಸ್ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಗುಡ್ ನ್ಯೂಸ್ ನೀಡಿದ್ದು, ಇನ್ಮುಂದೆ ವರ್ಷಕ್ಕೆ ಮೂರು ಬಾರಿ ಪರೀಕ್ಷೆ ಬರೆಯಬಹುದು ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2023-24 ರಿಂದ ಎಸ್ಎಸ್ಎಲ್ ಸಿ (ಹತ್ತನೇ ತರಗತಿ) ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಮಾರ್ಪಾಡು ಮಾಡಲಾಗುವುದು. ವಾರ್ಷಿಕ ಮೂರು ಬಾರಿ ಪರೀಕ್ಷೆ ನಡೆಸಲಾಗುವುದು. ಮೂರು ಪರೀಕ್ಷೆಗಳ ಫಲಿತಾಂಶ ಅಂತಿಮವಾಗಿ ನಿರ್ಣಯವಾಗಲಿದೆ. ಮೂರು ಪ್ರಯತ್ನಗಳಲ್ಲಿ ಅತ್ಯುತ್ತಮವಾದ ಅಂಕ ಉಳಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿದೆ ಎಂದರು.
ಶಾಲಾ ಶಿಕ್ಷಕರಿಗೆ ಇಪ್ಪತ್ತು, ಪ್ರೌಢ ಶಾಲಾ ಶಿಕ್ಷಕರಿಗೆ 20 ಪ್ರಶಸ್ತಿ, ವಿಶೇಷ ಶಿಕ್ಷಕರಿಗೆ ಇಬ್ಬರು ಸೇರಿದಂತೆ 41 ಉತ್ತಮ ಶಿಕ್ಷಕರಿಗೆ ರಾಜ್ಯ ಶಿಕ್ಷಕರ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ತಿಳಿಸಿದರು.
ಈ ಮುಂಚೆ ಮಕ್ಕಳಿಗೆ ವಾರಕ್ಕೆ 1 ಮೊಟ್ಟೆ ಕೊಡಲಾಗುತಿತ್ತು. 8,9,10 ನೇ ತರಗತಿ ಮಕ್ಕಳಿಗೆ ಮೊಟ್ಟೆ ಕೊಡ್ತಿರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ 1ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ವಾರಕ್ಕೆ 2 ಬಾರಿ ಮೊಟ್ಟೆ ಕೊಡುತ್ತಿದ್ದೇವೆ. 58 ಸಾವಿರ ಶಾಲೆಗಳಲ್ಲಿ 280 ಕೋಟಿ ರೂಪಾಯಿ ವೆಚ್ಚದಲ್ಲಿ ಮೊಟ್ಟೆ ಕೊಡುತ್ತಿದ್ದೇವೆ. ಶಿಕ್ಷಕರ ವರ್ಗಾವಣೆ ವಿಚಾರದಲ್ಲೂ ಸಾಕಷ್ಟು ಗೊಂದಲ ಇತ್ತು. 32 ಸಾವಿರ ಶಿಕ್ಷಕರು ಸ್ವಇಚ್ಛೆಯಿಂದ ವರ್ಗಾವಣೆಪಡೆದುಕೊಂಡಿದ್ದಾರೆ. ನಮ್ಮಸರ್ಕಾರ ಬಂದ ಮೇಲೆ 10 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದೇವೆ. ಕೊರೊನಾ ನಂತರ ಕಲಿಕಾ ಚೇತರಿಕೆ ಕಾರ್ಯಕ್ರಮ ಮಾಡುತ್ತಿದ್ದೇವೆ. ಮಕ್ಕಳು ಹಾಗೂ ಪೋಷಕರ ಒತ್ತಡ ಕಡಿಮೆ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಮಾತನಾಡಿ, ನಾನೂ ಕೂಡ ಶಿಕ್ಷಕ ವೃತ್ತಿಯಿಂದಲೇ ಬಂದವನು. ವೈದ್ಯಕೀಯ ಶಿಕ್ಷಣ ಮುಗಿಸಿದ ಮೇಲೆ ನಾನು ಶಿಕ್ಷಕನಾಗಿ ಕೆಲಸ ಮಾಡಿದ್ದೆ. ನಾವು ಬೋಧಕ- ಬೋಧಕೇತರ ಶಿಕ್ಷಕರನ್ನು ಆದಷ್ಟು ಬೇಗ ಖಾಯಂ ಮಾಡಲಿದ್ದೇವೆ. 216 ಪ್ರಾಂಶುಪಾಲರ ಹುದ್ದೆಯನ್ನು ಖಾಯಂಗೊಳಿಸಲಿದ್ದೇವೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಪದೋನ್ನತಿ ವಿಚಾರದಲ್ಲಿ ಹಲವು ಸಮಸ್ಯೆಗಳಿವೆ. ಈ ವಿಚಾರದಲ್ಲಿ ಶಿಕ್ಷಕರ ಪರವಾಗಿ ಸರ್ಕಾರ ನಿಲ್ಲಲಿದೆ ಎಂದರು.
ಉನ್ನತ ಶಿಕ್ಷಣಕ್ಕೆ ಕನಿಷ್ಟ 3.7 ಅನುದಾನದ ಅವಶ್ಯಕತೆ ಇದೆ. ಆದರೆ, ಪ್ರಸ್ತುತ ಕೇವಲ 1.5 ರಷ್ಟು ಅನುದಾನ ಮಾತ್ರ ಲಭ್ಯವಿದೆ. ಈ ಬಗ್ಗೆ ಸಿಎಂ ಗಮನಕ್ಕೆ ತರಲಾಗಿದೆ. ವಿಶ್ವ ವಿದ್ಯಾಲಯದ ವಿಚಾರದಲ್ಲಿ ಹಲವು ಸಮಸ್ಯೆಗಳಿವೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಐದು ವರ್ಷಗಳ ಅವದಿಯಲ್ಲಿ ಅತಿ ಹೆಚ್ಚು ಉದ್ಯೋಗಾವಕಾಶ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. 21 ಸಾವಿರ ಹೆಚ್ಚುವರಿ ಬಿಸಿಎ ಸೀಟುಗಳನ್ನು ಕಲ್ಪಿಸಲಾಗಿದೆ. ಪ್ರಥಮ ದರ್ಜೆ ಕಾಲೇಜುಗಳಲ್ಲಿ ದಾಖಲಾತಿ ಸಂಖ್ಯೆ ಹೆಚ್ಚು ಮಾಡಿದ್ದೇವೆ. ಸುಮಾರು 17 ಕಾಲೇಜುಗಳಿಗೆ ಭೇಟಿ ನೀಡಿರುವ ‘ನ್ಯಾಕ್’ ಸಮಿತಿ ಉತ್ತಮ ಭಾವನೆ ವ್ಯಕ್ತಪಡಿಸಿದೆ ಎಂದು ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.