ಚಿಕ್ಕಬಳ್ಳಾಪುರ: ಸುಧಾಕರ್ ಓರ್ವ ದೂರದೃಷ್ಟಿಯ ರಾಜಕಾರಣಿಯಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ರಾಜಕೀಯ ಭವಿಷ್ಯ ಅವರಿಗಿದೆ ಎಂದು ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.
ಚಿಕ್ಕಬಳ್ಳಾಪುರ ಉತ್ಸವದ 3ನೇ ದಿನದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಚಿಕ್ಕಬಳ್ಳಾಪುರವನ್ನು ಮಾದರಿ ಜಿಲ್ಲೆಯಾಗಿ ಮಾಡಲು ಸುಧಾಕರ್ ಶ್ರಮಿಸುತ್ತಿದ್ದಾರೆ. ಇವರು ಬದ್ಧತೆ ಇರುವ ಸಚಿವರಾಗಿದ್ದು ನಿಮ್ಮ ಋಣ ತೀರಿಸಲು ಕಷ್ಟಪಡುತ್ತಿದ್ದಾರೆ ಎಂದು ಹೇಳಿದರು.
ಮುಂದಿನ 10-12 ವರ್ಷದಲ್ಲಿ ಅರೋಗ್ಯ ಸಚಿವ ಕೆ ಸುಧಾಕರ್ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಹೊಂದಿರುವ ರಾಜಕಾರಣಿ ಆಗಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಘಟಾನುಘಟಿಗಳನ್ನು ಎದುರು ಹಾಕಿಕೊಂಡು ಅವರು ಕ್ಷೇತ್ರಕ್ಕೆ ವೈದ್ಯಕೀಯ ಕಾಲೇಜು ತಂದರು. ಅನೇಕರನ್ನು ವಿರೋಧ ಮಾಡಿಕೊಂಡು ಮನೆಗಳನ್ನು ಕೊಟ್ಟಿದ್ದಾರೆ. ಅದೇ ರೀತಿಯಲ್ಲಿ ಘಟಾನುಘಟಿಗಳನ್ನು ಎದುರು ಹಾಕಿಕೊಂಡು ಹಾಲು ಒಕ್ಕೂಟ ಮತ್ತು ಡಿಸಿಸಿ ಬ್ಯಾಂಕ್ ಪ್ರತ್ಯೇಕಿಸಲು ಶ್ರಮಿಸುತ್ತಿದ್ದಾರೆ ಎಂದರು.
ಸಚಿವ ಸುಧಾಕರ್ ಮಾತನಾಡಿ, ಸಚಿವ ಸೋಮಶೇಖರ್ ಅವರು ನನಗೆ ಸಹೋದರರಿದ್ದಂತೆ. ಅವರು ಹಿರಿಯರು ಅನುಭವಿಗಳು ಅವರ ಮಾರ್ಗದರ್ಶನ ಪಡೆದು ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 15 ವರ್ಷ ಆಗಿದೆ, ಗಡಿ ಜಿಲ್ಲೆ, ಬರದನಾಡು ಎಂಬ ಅಪವಾದ ಹೊತ್ತಿದ್ದ ಜಿಲ್ಲೆಯಲ್ಲಿ ಈಗ ಎಲ್ಲ ಕೆರೆಗಳೂ ತುಂಬಿ ಸಮೃದ್ಧಿಯಾಗಿದೆ ಎಂದು ಹೇಳಲು ಹರ್ಷವಾಗುತ್ತದೆ ಎಂದು ಜಿಲ್ಲೆಯ ಬಗ್ಗೆ ಸಂತಸ ಪಟ್ಟರು.