ಡಿಜಿಟಲ್ ಡೆಸ್ಕ್: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್, ಬಿಜೆಪಿ ಸರ್ಕಾರದಲ್ಲಿ ಮೂರೂವರೆ ವರ್ಷ ಸಚಿವರಾಗಿದ್ದರು. 2023ರ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದು ಶಾಸಕರಾಗಿರುವ ಅವರು, ಕ್ಷೇತ್ರದ ಮೂಲ ಬಿಜೆಪಿಗರ ಜತೆಗಿನ ಮನಸ್ಥಾಪದ ಕಾರಣಕ್ಕೆ ಪಕ್ಷ ಬಿಡಲು ಮುಂದಾಗಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ. ತಮ್ಮ ಬೆಂಬಲಿಗರೆಲ್ಲಾ ಕೈ ಹಿಡಿದ್ರೂ; ಸೋಮಶೇಖರ್ ಕಾಂಗ್ರೆಸ್ ಸೇರಲು ತಡ ಮಾಡ್ತಿರುವ ಹಿಂದೆ ಬಲವಾದ ಕಾರಣ! ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸಲು 17 ಜನ ಶಾಸಕರ ಜತೆ ಮುಂಬೈ ಹೋಟೆಲ್ ಸೇರಿದ್ದ ಎಸ್.ಟಿ. ಸೋಮಶೇಖರ್, ಕಾಂಗ್ರೆಸ್ ನಾಯಕರು ಎಷ್ಟೇ ಮನವೊಲಿಸಿದ್ದರೂ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿರಲಿಲ್ಲ. ನಂತರದ ದಿನಗಳಲ್ಲಿ ಬಿಜೆಪಿ ಸೇರಿ ಸಚಿವರಾಗಿದ್ದರು.


ಇದೀಗ ಕ್ಷೇತ್ರದ ಮೂಲ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ಜತೆ ಮುನಿಸಿಕೊಂಡಿರುವ ಸೋಮಶೇಖರ್ ಕಾಂಗ್ರೆಸ್ ಸೇರುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ. ಅದರ ಭಾಗವಾಗಿ ಅವರ ಬೆಂಬಲಿಗ ಮಾಜಿ ಕಾರ್ಪೋರೇಟರ್‌ಗಳು, ಮುಖಂಡರು ಹಾಗೂ ಕಾರ್ಯಕರ್ತರು ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಅದ್ದೂರಿಯಾಗಿ ಕಾಂಗ್ರೆಸ್ ಸೇರಿದ್ದಾರೆ. ಇನ್ನೇನು ಸೋಮಶೇಖರ್ ಕಾಂಗ್ರೆಸ್ ಸೇರಿಯೇಬಿಟ್ಟರು ಎನ್ನುವ ಹೊತ್ತಿಗೆ ದೆಹಲಿಯಿಂದ ಬಂದ ಅದೊಂದು ಫೋನ್ ಕಾಲ್‌ನಿಂದ! ಅವರು ಕಾಂಗ್ರೆಸ್ ಸೇರಲು ತಡಮಾಡುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ; ಡಿಕೆಶಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿಕೊಂಡ ಎಸ್.ಟಿ.ಸೋಮಶೇಖರ್ ಬೆಂಬಲಿಗರ ದಂಡು
ಸೋಮಶೇಖರ್ ತಮ್ಮ ಅಪ್ತರನ್ನೆಲ್ಲಾ ಕಾಂಗ್ರೆಸ್‌ಗೆ ಕಳುಹಿಸಿ ತಾವು ಮಾತ್ರ ಕ್ಷೇತ್ರದಲ್ಲಿ ಒಂಟಿಯಾಗಿರುವುದು ಯಾಕೆ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಅವರ ಈ ನಡೆಯ ಹಿಂದೆ ಹಲವು ಅನುಮಾನ ಶುರುವಾಗಿದೆ. ಬಿ.ಎಸ್. ಯಡಿಯೂರಪ್ಪ ಕರೆದಿದ್ದ ಸಭೆಗೆ ಗೈರಾಗಿದ್ದ ಸೋಮಶೇಖರ್, ಇನ್ನೇನು ಕಾಂಗ್ರೆಸ್ ಸೇರಿಯೇಬಿಟ್ಟರು ಎನ್ನಲಾಗಿತ್ತು. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಉಳಿಸಿಕೊಳ್ಳಲು ಮುಂದಾಗಿರುವ ಬಿಜೆಪಿ ವರಿಷ್ಠರು, ಕಳೆದ ಮೂರು ದಿನಗಳ ಹಿಂದೆ ಸೋಮಶೇಖರ್ ಗೆ ಕೇಂದ್ರದ ನಾಯಕರಿಂದ ಫೋನ್ ಮಾಡಿಸಿದ್ದಾರೆ ಎನ್ನಲಾಗಿದೆ.
ದೆಹಲಿಯಿಂದ ಫೋನ್ ಬರ್ತಿದ್ದಂಗೆ ಬೆದರಿದ ಸೋಮಶೇಖರ್, ಕಾಂಗ್ರೆಸ್ ಸೇರುವುದಕ್ಕೆ ತಡ ಮಾಡುತ್ತಿದ್ದಾರೆ ಎನ್ನಲಾಗಿದೆ. ಹಾಗದ್ರೆ, ಅವರಿಗೆ ಫೋನ್ ಕಾಲ್ ಮೂಲಕ ಬೆದರಿಕೆ ಹಾಕಿದ್ದು ಯಾರು ಹಾಗೂ ಯಾವ ವಿಷಯಕ್ಕೆ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ.
ಖಾಸಗಿ ವಿಡಿಯೋ ಮುಂದಿಟ್ಟು ಬೆದರಿಕೆ ಹಾಕಿದ್ರಾ?
ಎಸ್.ಟಿ. ಸೋಮಶೇಖರ್ ಕಾಂಗ್ರೆಸ್ ಸೇರದಂತೆ ಕೆಲವರು ವಿಡಿಯೋ ಮುಂದಿಟ್ಟು ಬೆದರಿಕೆ ಹಾಕಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಸೋಮಶೇಖರ್ ಕಾಂಗ್ರೆಸ್ ಸೇರುವ ನಿರ್ಧಾರಕ್ಕೆ ‘ಮುಂಬೈ ಮಿತ್ರ ಮಂಡಳಿ’ಯ ಕೆಲ ಸದಸ್ಯರೇ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಮೈತ್ರಿ ಸರ್ಕಾರ ಉರುಳಿಸಲು ಮುಂಬೈ ಹೋಟೆಲ್ ಸೇರಿದ್ದಾಗಿನ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗಿದೆ. ವಿರೋಧದ ನಡುವೆಯೂ ಸೋಮಶೇಖರ್ ಬಿಜೆಪಿ ಪಕ್ಷ ಬಿಟ್ರೆ ವೈಯುಕ್ತಿಕ ದಾಖಲೆ ಬಿಡುಗಡೆಗೆ ಬಿಜೆಪಿಯ ಕೆಲ ನಾಯಕರು ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.


ಸಮಿಶ್ರ ಸರ್ಕಾರ ಕೆಡವಲು ಮುಂಬೈಗೆ ತೆರಳಿದ್ದ 17 ಜನ ಶಾಸಕರ ರಾಸಲೀಲೆ ಸಿಡಿ ಬಿಜೆಪಿ ನಾಯಕರ ಬಳಿ ಇದ್ದು, ಯಾರಾದರೂ ಪಕ್ಷ ತೊರೆಯುತ್ತಾರೆ ಎಂದು ಗೊತ್ತಾದರೆ ವಿಡಿಯೋ ಬಿಡುಗಡೆ ಮಾಡಲು ಬಿಜೆಪಿ ನಾಯಕರು ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ರಾಜೀನಾಮೆ ನೀಡಿದ ಮೇಲೆ ಬಾಂಬೆ ಹೋಟೇಲ್ ನಲ್ಲಿ ರಾಸಲೀಲೆ ನಡೆಸಿದ್ದಾರೆ ಅಂತ ಈ ಹಿಂದೆ ಕೆಲ ರಾಜಕಾರಣಿಗಳು ಆರೋಪ ಮಾಡಿದ್ದರು. ಆರೋಪದ ಬೆನ್ನಲ್ಲೆ ಸೋಮಶೇಖರ್ ಸೇರಿದಂತೆ 17 ಶಾಸಕರು ಹೈಕೋರ್ಟ್ ನಲ್ಲಿ ತಮ್ಮ ತೇಜೋವದೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿದ್ದರು. ಅದರೆ, ಈಗ ಅದೇ ವಿಡಿಯೋಗಳನ್ನು ಇಟ್ಟುಕೊಂಡಿರುವ ಬಿಜೆಪಿ ನಾಯಕರು, ವಲಸಿಗರನ್ನು ಪಕ್ಷ ತೊರೆಯದಂತೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ; ಬಿಜೆಪಿ ವರಿಷ್ಠರ ಜತೆ ಮುನಿಸು; ಬಿಎಸ್‌ವೈ ನೇತೃತ್ವದ ಸಭೆಗೆ ಶಾಸಕ ಎಸ್‌ಟಿಎಸ್ ಗೈರು!
ಬಿಜೆಪಿ ಬೆದರಿಕೆಗೆ ಪಕ್ಷ ಬಿಡಲ್ಲ ಅಂದ್ರ ಎಸ್ ಟಿಎಸ್?
ಸೋಮಶೇಖರ್ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಹಲವು ತಂತ್ರಗಾರಿಕೆ ನಡೆಸುತ್ತಿರುವ ಬಿಜೆಪಿ ಹೈಕಮಾಂಡ್ ವರಿಷ್ಠರು, ಅವರು ಮಂತ್ರಿಯಾಗಿದ್ದಾಗ ನಡೆಸಿರೋ ಕಾಮಗಾರಿಗಳ ಲೆಕ್ಕ ಕೂಡುವಂತೆ ಹಾಗೂ ಅವರ ಅವಧಿಯಲ್ಲಿ ನಡೆಸಿರೋ ಕಾಮಗಾರಿಗಳು, ಈ ಹಿಂದೆ ಅವರ ಮೇಲೆ ದಾಖಲಾಗಿರುವ ಕೇಸ್ ಗಳ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ಸೋಮಶೇಖರ್ ಕಾಂಗ್ರೆಸ್ ಸೇರಿದರೆ ಅವರ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆಗಳು ಮುಗಿಬೀಳುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಬಿಜೆಪಿ ಹಿರಿಯ ನಾಯಕರು ಹಾಗೂ ಹೈಕಮಾಂಡ್ ವರಿಷ್ಠರ ಬೆದರಿಕೆ ತಂತ್ರಕ್ಕೆ ಬೆದರಿ ಸೋಮಶೇಖರ್ ಬಿಜೆಪಿಯಲ್ಲೇ ಉಳಿಯುತ್ತಾರಾ ಅಥವಾ ಕಾಂಗ್ರೆಸ್ ಸೇರುತ್ತಾರಾ ಎಂಬುದು ಮಾತ್ರ ಸದಸ್ಯರ ರಾಜಕೀಯ ಕುತೂಹಲವಾಗಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.